ಮನೆಯಲ್ಲೇ ಪರಕೀಯರಾದ ಪಂಡಿತರ ಅಳಲೇಕೆ ಇಂದಿಗೂ ಅಸ್ಪೃಶ್ಯ?

ಮನೆಯಲ್ಲೇ ಪರಕೀಯರಾದ ಪಂಡಿತರ ಅಳಲೇಕೆ ಇಂದಿಗೂ ಅಸ್ಪೃಶ್ಯ?
‘ನಾನು ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ನಾನೇನೇ ಮಾತನಾಡಿದರೂ ಅದು ವಿವಾದವಾಗುತ್ತದೆ ’ ಹಾಗಂತಲೇ ಅವರು ಮಾತು ಆರಂಭಿಸಿದ್ದರು . ‘ಯಾರೂ ತಮ್ಮ ಮಕ್ಕಳನ್ನು ಸಾಯಲಿ ಎಂದು ಸೇನೆಗೆ ಕಳುಹಿಸುವುದಿಲ್ಲ. ನೀವು ನೀಡಿರುವ ಔಟ್‌ಡೇಟೆಡ್ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡೂ ಜಗತ್ತಿನ ಇನ್ಯಾವುದೇ ರಕ್ಷಣಾ ಪಡೆಗೆ ಕಡಿಮೆಯಿಲ್ಲ ಅನ್ನುವ ರೀತಿಯಲ್ಲಿ ಭಾರತೀಯ ಪಡೆಗಳು ಕರ್ತವ್ಯ ನಿರ್ವಹಿಸುತ್ತಿವೆ ’ ಹೀಗೆ ಅಭಿಮಾನದಿಂದ ಮಾತನಾಡುತ್ತ ಹೋದ ಉಣ್ಣಿಕೃಷ್ಣನ್, ಕೊನೆಗೊಂದು ಮಾತು ಹೇಳಿದರು. ‘ನನಗೆ ಯಾವಾಗ ಸಮಾಧಾನವಾಗುತ್ತದೆ ಎಂದರೆ, ಅಥವಾ ಮೇಜರ್ ಸಂದೀಪ್ ಆತ್ಮಕ್ಕೆ ಯಾವಾಗ ಶಾಂತಿ ಸಿಗಬಹುದು ಎಂದರೆ, ಕಾಶ್ಮೀರ ಕಣಿವೆಯಿಂದ ಹೊರದಬ್ಬಲಾಗಿರುವ ಜನರಲ್ಲಿ ಶೇಕಡ ೫೦ರಷ್ಟು ಮಂದಿಯನ್ನಾದರೂ ಹಿಂದಕ್ಕೆ ಕರೆಸಿಕೊಂಡು ಅವರಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸುವುದು ಸಾಧ್ಯವಾದರೆ..’ ಎಂದು ಅವರು ಉಸಿರೆಳೆದುಕೊಂಡರು.
ಹಾಗೆ ಹೇಳಿದ್ದು ಎನ್‌ಡಿಟಿವಿ ೨೦೦೮ರ ವರ್ಷದ ಭಾರತೀಯ ಪ್ರಶಸ್ತಿ ಸಮಾರಂಭದಲ್ಲಿ. ಮುಂಬಯಿ ದಾಳಿಯಲ್ಲಿ ಹುತಾತ್ಮರಾದ ವೀರರ ಕುಟುಂಬಗಳಿಗೆ ಹೃದಯಸ್ಪರ್ಶಿ ಸನ್ಮಾನ ನೀಡಿದ ಎನ್‌ಡಿಟಿವಿ, ಆ ಸಂದರ್ಭದಲ್ಲಿ ಸಂದೀಪ್ ತಂದೆ ಉಣ್ಣಿಕೃಷ್ಣನ್ ಅವರನ್ನು ಮಾತನಾಡಲು ಕೇಳಿಕೊಂಡ ಭಾವುಕ ಸಂದರ್ಭವದು. ಸಾಮಾನ್ಯವಾಗಿ ಮಕ್ಕಳನ್ನು ಕಳೆದುಕೊಂಡವರು ಇಂಥ ಸಂದರ್ಭಗಳಲ್ಲಿ ಮಾತನಾಡಬೇಕಾಗಿ ಬಂದಾಗ ಗದ್ಗದಿತರಾಗುತ್ತಾರೆ. ಅಗಲಿದವರ ನೆನಪು ಹೊತ್ತೇ ಮಾತಾಡುತ್ತಾರೆ. ಆದರೆ ಅಂಥ ವೇಳೆಯಲ್ಲೂ ದೇಶದ ಹಿತದೃಷ್ಟಿಯ ಕುರಿತೇ ಮಾತನಾಡಿದ ಉಣ್ಣಿಕೃಷ್ಣನ್ ಅವರನ್ನು ಆಲಿಸುತ್ತಾ ವೀಕ್ಷಕರ ಕೊರಳ ಸೆರೆ ಉಬ್ಬಿ ಬಂತು. ಇಂಥವರ ಮಗನಾಗಿ ಒಬ್ಬ ಸಂದೀಪ್ ಅಲ್ಲದೇ ಇನ್ಯಾರು ಹುಟ್ಟುತ್ತಾರೆ ಅಂತನಿಸಿಬಿಟ್ಟಿತು.
ವಿಶೇಷವೆಂದರೆ ಉಣ್ಣಿಕೃಷ್ಣನ್ ಮಾತುಗಳನ್ನು ಕೇಳಿಸಿಕೊಂಡು ಮನನ ಮಾಡಿಕೊಳ್ಳಬೇಕಾದವರೆಲ್ಲರೂ ವೇದಿಕೆಯ ಮುಂಭಾಗದಲ್ಲೇ ಇದ್ದರು. ಮುಖ್ಯವಾಗಿ ಎಲ್. ಕೆ. ಆಡ್ವಾಣಿ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ. ಅದೇ ವೇದಿಕೆಯಲ್ಲಿ ನವಪೀಳಿಗೆಯ ರಾಜಕೀಯ ನೇತಾರ ಎಂಬ ಪುರಸ್ಕಾರ ಸ್ವೀಕರಿಸಿದ್ದ ಉಮರ್, ‘ಕಾಶ್ಮೀರವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಶ್ರಮವಹಿಸುತ್ತೇನೆ. ಸಮಾರಂಭದಲ್ಲಿ ನನ್ನ ಪಕ್ಕದಲ್ಲೇ ಕುಳಿತಿರುವ ಆಮೀರ್ ಖಾನ್ ಕಾಶ್ಮೀರದಲ್ಲೇ ಚಿತ್ರೀಕರಣಕ್ಕೆ ಬರುವಂತಹ ವಾತಾವರಣ ನಿರ್ಮಿಸುವುದು ನನ್ನ ಅಭಿಲಾಷೆ ’ ಎಂದಿದ್ದರು. ಆ ನಂತರದ ಉಣ್ಣಿಕೃಷ್ಣನ್ ಮಾತುಗಳು ನಿಜಕ್ಕೂ ಕಾಶ್ಮೀರದ ವಾತಾವರಣ ಸುಧಾರಿಸುವುದು ಎಂದರೆ ಏನರ್ಥ ಎಂಬುದಕ್ಕೆ ದಿಕ್ಸೂಚಿಯಂತಿತ್ತು.
ಅದರಲ್ಲೂ ವೇದಿಕೆಯ ಮುಂಭಾಗದಲ್ಲಿ ‘ಜೀವಮಾನದ ಸಾಧನೆ’ ಪುರಸ್ಕಾರಕ್ಕೆ ಪಾತ್ರರಾದ ಬಿಜೆಪಿ ನಾಯಕ ಎಲ್. ಕೆ. ಆಡ್ವಾಣಿ ಕುಳಿತಿದ್ದರಲ್ಲ ? ಅವರನ್ನೂ ಉಣ್ಣಿಕೃಷ್ಣನ್ ದೃಷ್ಟಿಕೋನವನ್ನೂ ಅಕ್ಕ ಪಕ್ಕ ಇಟ್ಟು ನೋಡಿದ ತಕ್ಷಣವೇ ದೂರದ ಕಾಶ್ಮೀರ ಕಣಿವೆಯಿಂದ ಒಂದು ಆರ್ತನಾದ ಕಿವಿಗೆ ಬಡಿದ ಭಾವ. ಇತಿಹಾಸದ ಅಮಾನುಷ ಅವಮಾನಗಳು ಇದ್ದಕ್ಕಿದ್ದಂತೆ ನರ್ತಿಸತೊಡಗಿದವೇನೋ ಅನಿಸಹತ್ತಿತು.
ಅವತ್ತು ಸೆಪ್ಟೆಂಬರ್ ೧೪, ೧೯೮೯. ಎಲ್. ಕೆ. ಆಡ್ವಾಣಿ ತಲೆಬಗ್ಗಿಸಿಕೊಂಡು ಶವಯಾತ್ರೆಯೊಂದರಲ್ಲಿ ಹೆಜ್ಜೆ ಹಾಕುತ್ತಿದ್ದರು. ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಉಪಾಧ್ಯಕ್ಷ ಟಿಕಾ ಲಾಲ್ ಟಪ್ಲೂ ಕಣಿವೆಯ ಮುಸ್ಲಿಂ ಪ್ರತ್ಯೇಕತಾವಾದಿಗಳ ಗುಂಡಿಗೆ ಬಲಿಯಾಗಿದ್ದರು. ಅವರ ಅಂತ್ಯಸಂಸ್ಕಾರಕ್ಕೆಂದು ಸಾಗುತ್ತಿದ್ದ ಆಡ್ವಾಣಿ ಸಹಿತ ಇತರೆಲ್ಲರ ಮೇಲೂ ಮುಸುಕು ಧರಿಸಿ ಮರೆಯಲ್ಲಿ ನಿಂತ ಪ್ರತ್ಯೇಕತಾವಾದಿ ಪುಂಡರು ಕಲ್ಲುಗಳನ್ನು ತೂರಿದರು. ಹಿಂದೂ-ಮುಸ್ಲಿಂ ಬೇಧವಿಲ್ಲದೇ ಎಲ್ಲ ಕೋಮುಗಳಲ್ಲೂ ಜನಪ್ರಿಯರಾಗಿದ್ದ ಶ್ರೀನಗರದ ಹಬ್ಬಾ ಕದಾಲ್ ಕ್ಷೇತ್ರದ ಟಿಕಾರ ಹತ್ಯೆ ಇಡೀ ಪ್ರದೇಶಕ್ಕೆ ಸೂತಕದ ಮುಸುಕು ಹಾಕಿತ್ತು. ಆದರೇನಂತೆ, ಗೌರವಾರ್ಥವಾಗಿ ಮುಚ್ಚಿದ್ದ ಅಷ್ಟೂ ಅಂಗಡಿ ಮುಂಗಟ್ಟುಗಳನ್ನೂ ಒಂದು ಕಡೆಯಿಂದ ಬಲಾತ್ಕಾರವಾಗಿ ಬಾಗಿಲು ತೆಗೆಯುವಂತೆ ಮಾಡಿದ ಪ್ರತ್ಯೇಕತಾವಾದಿಗಳು ವಿಕೃತ ಸಂತೋಷ ಆಚರಿಸಿದರು.
ಹಾಗೆ ಶುರುವಾಗಿತ್ತು ಕಾಶ್ಮೀರಿ ಪಂಡಿತರ ಮಾರಣಹೋಮ. ಈಗಲ್ಲಿ ಕಾಶ್ಮೀರಿ ಪಂಡಿತರು ಇಲ್ಲ. ಸುಮಾರು ಏಳು ಲಕ್ಷ ಕಾಶ್ಮೀರಿ ಪಂಡಿತರು ಬಲವಂತವಾಗಿ ಹಾಗೂ ಅತಿ ಕ್ರೂರವಾಗಿ ತಮ್ಮ ತಾಯ್ನಾಡಿನ ಬೇರುಗಳಿಂದ ಬೇರ್ಪಟ್ಟು ಜಮ್ಮು ಹಾಗೂ ದಿಲ್ಲಿಯಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ೧೯೯೦ರಿಂದಲೇ ಕಾಶ್ಮೀರಿ ಪಂಡಿತರನ್ನು ಒಕ್ಕಲೆಬ್ಬಿಸುವ ಕಾರ್‍ಯ ಆರಂಭವಾಯಿತು. ಮೊನ್ನೆ ಜನವರಿ ೧೯ಕ್ಕೆ ಕಾಶ್ಮೀರಿ ಪಂಡಿತರ ಸಮುದಾಯದ ಕರುಣಾಜನಕ ಕತೆಗೆ ೧೯ ವರ್ಷಗಳು ತುಂಬಿಹೋದವು.
೧೯೯೦ರ ಜನವರಿ ೪ರಂದು ಸ್ಥಳೀಯ ಉರ್ದು ಪತ್ರಿಕೆ ‘ಅಫ್ತಾಬ್’ನಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿತು. ಹಿಂದೂಗಳು ಕಾಶ್ಮೀರ ಬಿಟ್ಟು ತೊಲಗಬೇಕು ಹಾಗೂ ಕಾಶ್ಮೀರ ಪಾಕಿಸ್ತಾನಕ್ಕೆ ಸೇರ್ಪಡೆಯಾಗಬೇಕು ಎಂಬ ಆಗ್ರಹ ಹೊತ್ತ ಒಕ್ಕಣೆಯಾಗಿತ್ತದು. ಅದರ ಬೆನ್ನಲ್ಲೇ ಕಣಿವೆಯಲ್ಲಿ ಬಂದೂಕಿನ ಘರ್ಜನೆ ಹಾಗೂ ಪ್ರತ್ಯೇಕತಾವಾದಿಗಳ ತುಚ್ಛ ಘೋಷಣೆಗಳು ಒಟ್ಟೊಟ್ಟಿಗೇ ಮೊಳಗತೊಡಗಿದವು. ‘ಗಡಿ ದಾಟುತ್ತೇವೆ. ಕಲಾಷ್ನಿಕೋವ್ ತರುತ್ತೇವೆ ’ ಅಂತ ಒಂದು ಧ್ವನಿವರ್ಧಕ ಅರಚಿಕೊಂಡರೆ, ‘ಪಂಡಿತರೇ ನಿಮ್ಮ ಹೆಂಡಂದಿರನ್ನು ಇಲ್ಲಿಯೇ ಬಿಟ್ಟು ಹೊರಹೋಗಿ, ನಾವು ಜತೆ ಸೇರಿ ಪಾಕಿಸ್ತಾನ ನಿರ್ಮಿಸುತ್ತೇವೆ ’ ಎಂಬ ಇನ್ನೊಂದು ಘೋಷಣೆ ಪ್ರತ್ಯೇಕತಾವಾದಿಗಳು ಮನುಷ್ಯರಾಗಿ ಉಳಿದಿಲ್ಲ ಎಂಬುದನ್ನು ಸಾರಿ ಹೇಳುತ್ತಿತ್ತು. ಹಿಂದುಗಳು ಮನೆಯಿಂದಲೇ ಹೊರಬೀಳದ ಪರಿಸ್ಥಿತಿ ನಿರ್ಮಾಣವಾಗಿಹೋಯಿತು. ಜೀವ ಕೈಯಲ್ಲಿ ಹಿಡಿದು ಯಾವಾಗಲೋ ಒಮ್ಮೆ ಹೊರಗೆ ಕಾಲಿಟ್ಟ ಹಿಂದುಗಳಿಗೆ ಕಂಡದ್ದು , ‘ಅಲ್ಲಾನನ್ನು ಒಪ್ಪಿಕೊಳ್ಳಿ; ಇಲ್ಲವೇ ಕಾಶ್ಮೀರ ಬಿಟ್ಟು ತೊಲಗಿ’ ಎಂದು ಜಿಹಾದಿಗಳು ಮನೆ ಬಾಗಿಲಿಗೆ ಅಂಟಿಸಿಹೋಗಿದ್ದ ಭಿತ್ತಿಪತ್ರ. ಕಾಶ್ಮೀರದ ಬೀದಿಗಳಲ್ಲಿ ಒಂದೊಂದಾಗಿ ಹಿಂದುಗಳ ಹೆಣ ಬೀಳತೊಡಗಿತು. ಟಿಕಾ ಹತ್ಯೆ ನಡೆದ ಕೆಲ ತಿಂಗಳುಗಳಲ್ಲೇ ೩೦೦ ಹಿಂದುಗಳನ್ನು ಅಮಾನುಷವಾಗಿ ಕೊಲೆ ಮಾಡಲಾಯಿತು. ಶ್ರೀನಗರ ಹೈಕೋರ್ಟ್ ನ್ಯಾಯಮೂರ್ತಿ ಕೆ. ಎನ್. ಗಂಜು ಅವರೇ ಹತ್ಯೆಯಾಗಿ ಹೋದರು ಎಂದರೆ ಇನ್ನು ಸಾಮಾನ್ಯರ ಕತೆಯೇನಾಗಿರಬಹುದು? ೮೦ರ ವೃದ್ಧ ಸರ್ವಾನಂದ ಸ್ವಾಮಿ ಹಾಗೂ ಅವರ ಮಗನನ್ನು ಅಪಹರಿಸಿದ ಜಿಹಾದಿಗಳು ಇಬ್ಬರ ಕಣ್ಣುಗಳನ್ನು ಕಿತ್ತು ಹಿಂಸಾವಿನೋದ ಅನುಭವಿಸಿ ಸಾಯಿಸಿದರು. ಶ್ರೀನಗರದ ಸೌರಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಯಿತು. ಅತ್ಯಾಚಾರಕ್ಕೊಳಗಾದ ಇನ್ನೊಬ್ಬ ಮಹಿಳೆಯ ದೇಹವನ್ನು ಶಾಮಿಲ್‌ನಲ್ಲಿಟ್ಟು ತುಂಡು ತುಂಡು ಮಾಡಲಾಗಿತ್ತು. ಇಷ್ಟೆಲ್ಲ ನಡೆಯುತ್ತಿದ್ದರೆ ಫರೂಕ್ ಅಬ್ದುಲ್ಲಾರ ಸರಕಾರ ಇದ್ದೂ ಇಲ್ಲದ ಹಾಗಿತ್ತು.
ತಾಯ್ನಾಡನ್ನು ತೊರೆಯುವ ಯಾತನಾಮಯ ನಿರ್ಧಾರ ತೆಗೆದುಕೊಳ್ಳದೇ ಕಾಶ್ಮೀರಿ ಪಂಡಿತರಿಗೆ ಬೇರೆ ದಾರಿಯೇ ಇರಲಿಲ್ಲ. ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಒಂದಿಡೀ ಸಮುದಾಯವೇ ಕಾಶ್ಮೀರ ತೊರೆದು ಜಮ್ಮು ಹಾಗೂ ದಿಲ್ಲಿಯಲ್ಲಿ ಬಂದು ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿತು. ಅಲ್ಲಿಗೆ ೫ ಸಾವಿರ ವರ್ಷಗಳ ನಾಗರಿಕತೆಯೊಂದು ಸುದ್ದಿಯಾಗದಂತೆ ಸತ್ತುಹೋಯಿತು. ಘೋರ ವ್ಯಂಗ್ಯವೊಂದು ಭೀಭತ್ಸವಾಗಿ ನಕ್ಕಿದ್ದು ಆವಾಗಲೇ. ಹಿಂದು ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲಾಗುವ ಯಾವುದೇ ದೌರ್ಜನ್ಯಕ್ಕೂ ‘ಮಾರಣಹೋಮ’, ‘ಜನಾಂಗೀಯ ದಮನ’ ಎಂಬ ಪದಪುಂಜಗಳನ್ನು ಪ್ರಯೋಗಿಸುವ ಮಾಧ್ಯಮ ಹಾಗೂ ರಾಜಕೀಯ ಪಕ್ಷಗಳ ಕಣ್ಣಿಗೆ ಕಾಶ್ಮೀರಿ ಪಂಡಿತರ ಗೋಳು ಕೊನೆಪಕ್ಷ ನಿರಾಶ್ರಿತರ ಸಮಸ್ಯೆಯಾಗಿಯೂ ಕಾಣಲಿಲ್ಲ. ಜಿಹಾದಿಗಳ ಕ್ರೌರ್‍ಯಕ್ಕೆ ಯಾರಿಂದಲೂ ರಕ್ಷಣೆ ಸಿಗದೇ ತಾಯ್ನಾಡು ತೊರೆದು ಬಂದ ಕಾಶ್ಮೀರಿ ಪಂಡಿತರನ್ನು ‘ವಲಸಿಗರು’ ಎಂಬ ಪಟ್ಟಿಯಲ್ಲಿ ಸೇರಿಸಲಾಯಿತು! ಅಂದರೆ, ಈ ಹಿಂದುಗಳು ತಮ್ಮ ಇಷ್ಟಾನುಸಾರವಾಗಿ ವಲಸೆ ಬಂದಿದ್ದಾರೆ. ಮಾನವ ಹಕ್ಕುಗಳ ಗುತ್ತಿಗೆ ಪಡೆದೇ ಅವತರಿಸಿದಂತೆ ವರ್ತಿಸುವ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಈ ವಿಷಯದಲ್ಲಿ ನೆಪಕ್ಕೊಂದು ತನಿಖೆ ನಡೆಸಿತು. ಕಾಶ್ಮೀರಿ ಪಂಡಿತರ ಮೇಲಾದ ಕ್ರೌರ್‍ಯವನ್ನು ‘ಜಿನೋಸೈಡ್’(ಸಾಮೂಹಿಕ ಹತ್ಯಾಕಾಂಡ) ಹಾಗೂ ‘ಎಥ್ನಿಕ್ ಕ್ಲಿನ್ಸಿಂಗ್’ ಅಂತ ಆಯೋಗ ಒಪ್ಪಿಕೊಳ್ಳಲಿಲ್ಲ.
ಯಾವ್ಯಾವುದೋ ದೇಶದಿಂದ ಆಶ್ರಯ ಬಯಸಿ ಬಂದವರಿಗೆಲ್ಲ ಸೂರು ಕೊಟ್ಟ ದೇಶ ಭಾರತ ಅಂತ ಹೆಮ್ಮಪಟ್ಟುಕೊಳ್ಳುವ ನಾವು, ನಮ್ಮವರೇ ಆದ ಕಾಶ್ಮೀರಿ ಪಂಡಿತರನ್ನು ನಡೆಸಿಕೊಳ್ಳುತ್ತಿರುವುದಾದರೂ ಹೇಗೆ? ಜಮ್ಮುವಿನ ಮುಥಿ ಶಿಬಿರದ ಪಂಡಿತರ ಮನೆಗಳ ಚಿತ್ರಗಳ ಮೇಲೆ ಸುಮ್ಮನೇ ಕಣ್ಣಾಡಿಸಿದರೂ ಸಾಕು ಅವರ ಅಬ್ಬೇಪಾರಿ ಬದುಕಿನ ವಿವರಗಳು ಬಿಚ್ಚಿಕೊಳ್ಳುತ್ತವೆ. ಅವನ್ನು ಮನೆಗಳು ಅನ್ನುವಂತಿಲ್ಲ. ಹತ್ತು ಅಡಿ ಅಗಲ ಹತ್ತು ಅಡಿ ಉದ್ದದ ಶೆಡ್‌ಗಳವು. ಕುಟುಂಬದ ಪಾಲಿಗೆ ಅದೇ ಜಗತ್ತು. ಎರಡು ಹೆಜ್ಜೆ ಇಟ್ಟರೆ ಅಡಿಗೆ ಮನೆ, ಇನ್ನೊಂದು ಹೆಜ್ಜೆ ಮುಂದಿಟ್ಟರೆ ಅಲ್ಲೇ ದೇವರ ಪಟ, ಮೂರು ಹೆಜ್ಜೆ ಹಿಂದಿಟ್ಟರೆ ಅದೇ ಬೆಡ್‌ರೂಮ್. ಮನೆ ಹಿರಿಯರಾರೋ ಶೆಡ್ ಹೊರಗೆ ಕುಳಿತಿದ್ದಾರೆಂದರೆ ಅದರರ್ಥ, ಅಳಿಯ-ಸೊಸೆ ಒಳಗಿದ್ದಾರೆ ಅಂತ. ಈ ಶೆಡ್‌ಗಳ ಚಾವಣಿಗೆ ಕಬ್ಬಿಣದ ಶೀಟ್‌ಗಳನ್ನು ಬಳಸಲಾಗಿದೆಯಾದ್ದರಿಂದ ಬೇಸಿಗೆಯಲ್ಲಿ ಬೇಯುವ ಅನುಭವ. ಒಮ್ಮೆ ಪ್ರಧಾನಿ ಮನಮೋಹನ್ ಸಿಂಗ್ ಈ ಶಿಬಿರಕ್ಕೆ ಭೇಟಿ ನೀಡಿದ್ದರು. ಆಗ ಅವರದ್ದೇ ಓರಗೆಯ ಅಜ್ಜಿ ಶೆಡ್‌ನ ಅತಿಚಿಕ್ಕ ಬಾಗಿಲಿನತ್ತ ಬೊಟ್ಟು ಮಾಡಿ ಕೇಳಿದ್ದಳು, ‘ನಾನು ಸತ್ತಮೇಲೆ ಹೇಗೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತಾರೆ?’. ಆ ಪ್ರಶ್ನೆಗೆ ಸಿಂಗ್ ಕಣ್ಣುಗಳು ಹನಿಗೂಡಿದ್ದವು. ಆದರೆ, ಪಂಡಿತರಿಗೆ ಪ್ಯಾಕೇಜ್ ಘೋಷಿಸಿ ಹೊರಬಂದಿದ್ದು ಬಿಟ್ಟರೆ ಮತ್ತೇನೂ ಮಾಡುವ ಸ್ಥಿತಿ ಅವರದಾಗಿರಲಿಲ್ಲ.
ಶಿಬಿರಗಳಲ್ಲಿನ ದೈನೇಸಿ ಬದುಕು ಇವರನ್ನು ಖಿನ್ನತೆಯಂಥ ಮಾನಸಿಕ ವ್ಯಸನಗಳಿಗೆ ತುತ್ತಾಗಿಸಿದೆ. ೧೯೯೭ರಲ್ಲಿ ಜಮ್ಮುವಿನ ನಾನಾ ಶಿಬಿರಗಳ ೩೦೦ ಕಾಶ್ಮೀರಿ ಪಂಡಿತರ ಕುಟುಂಬಗಳನ್ನು ಕೇಂದ್ರೀಕರಿಸಿ ಒಂದು ಅಧ್ಯಯನ ಕೈಗೊಳ್ಳಲಾಗಿತ್ತು.. ಅಲ್ಲಿ ಬೆಳಕಿಗೆ ಬಂದ ಸಂಗತಿಯೆಂದರೆ, ೧೯೯೦-೧೯೯೫ರ ಅವಯಲ್ಲಿ ಈ ಕುಟುಂಬಗಳಲ್ಲಿ ಒಟ್ಟು ೧೬ ಜನನಗಳಾಗಿವೆ ಹಾಗೂ ೪೯ ಸಾವುಗಳಾಗಿವೆ. ಒತ್ತಡದ ಜೀವನದಿಂದಾಗಿ ಮಹಿಳೆಯರ ಋತುಚಕ್ರದಲ್ಲಿ ಏರುಪೇರು, ಮರೀಚಿಕೆಯಾಗಿರು ಖಾಸಗೀತನ.. ಈ ಸ್ವರೂಪಗಳು ಹೀಗೆಯೇ ಮುಂದುವರಿದರೆ ‘ಕಾಶ್ಮೀರಿ ಪಂಡಿತರು ಎಂಬುದೊಂದು ಸಮುದಾಯವಿತ್ತು’ ಎಂದು ಇತಿಹಾಸದ ಪಠ್ಯದಲ್ಲಿ ಓದಿಕೊಳ್ಳುವ ದಿನಗಳು ಬಂದಾವು.
ಜಮ್ಮು-ಕಾಶ್ಮೀರ ಸರಕಾರ ಹಾಗೂ ನಾನಾ ರಾಜಕೀಯ ಪಕ್ಷಗಳು ಆಗಾಗ್ಗೆ ಪಂಡಿತರ ಪುನರ್ವಸತಿ ಬಗ್ಗೆ ಮಾತನಾಡುತ್ತವೆ. ವರ್ಷದ ಹಿಂದೆ ಕೆಲ ಮುಸ್ಲಿಂ ಧಾರ್ಮಿಕ ನಾಯಕರೂ ಪಂಡಿತರಿಗೆ ಪುನಃ ಕಾಶ್ಮೀರಕ್ಕೆ ಸ್ವಾಗತ ಎಂದಿದ್ದರು. ಆದರೆ ಹೀಗೆಲ್ಲ ಹೇಳಿಕೆ ನೀಡುತ್ತಿರುವ ಯಾರಲ್ಲೂ ಪ್ರಾಮಾಣಿಕ ಕಾಳಜಿ ವ್ಯಕ್ತವಾಗುತ್ತಿಲ್ಲ. ಪಂಡಿತರ ಹಿಂತಿರುಗುವಿಕೆ ಪ್ರಸ್ತಾವವಾದಗಲೆಲ್ಲ ಉಗ್ರರ ಆಕ್ರೋಶ ವ್ಯಕ್ತವಾಗಿದೆ. ೧೯೯೮ರ ಏಪ್ರಿಲ್ ೨೧ರಂದು ಉಧಮ್‌ಪುರದಲ್ಲಿ ೨೬ ಹಿಂದುಗಳ ಹತ್ಯೆ, ಮಾರ್ಚ್ ೨೦೦೩ರಲ್ಲಿ ಪುಲ್ವಾಮಾದಲ್ಲಿ ನಡೆದ ೨೪ ಕಾಶ್ಮೀರಿ ಪಂಡಿತರ ಕಗ್ಗೊಲೆಯಂಥ ಘಟನೆಗಳು ಕಾಶ್ಮೀರವು ಹಿಂದುಗಳ ಪಾಲಿಗೆ ಸುರಕ್ಷಿತವಲ್ಲ ಎಂಬುದನ್ನು ದೃಢಪಡಿಸಿದೆ.
ಈ ಎಲ್ಲ ಹತಾಶೆಗಳ ನಡುವೆಯೂ ಏನೋ ಒಂದು ಆಶಾಭಾವ ಚಿಮ್ಮಿದಂತಿದೆ. ಅವತ್ತು ಅಸಹಾಯಕರಾಗಿ ಶವಯಾತ್ರೆಯಲ್ಲಿ ತಲೆಬಗ್ಗಿಸಿಕೊಂಡು ನಡೆದಿದ್ದ ಆಡ್ವಾಣಿ ಪಕ್ಷಕ್ಕೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ೧೧ ಸೀಟುಗಳು ಸಿಕ್ಕಿವೆ. ಅವಕಾಶವಾದಿಯಾದರೂ ಪ್ರತ್ಯೇಕತಾವಾದಿಗಳ ಪಟಾಲಂಗೆ ಹೋಲಿಸಿದರೆ ಸಾವಿರ ಪಾಲು ಉತ್ತಮ ಎಂಬಂತಿರುವ ನ್ಯಾಷನಲ್ ಕಾನೆರೆನ್ಸ್ ಅಕಾರದ ಗದ್ದುಗೆ ಹಿಡಿದಿದೆ. ಇವನ್ನೆಲ್ಲ ಗಮನಿಸಿಯೇ ಉಣ್ಣಿಕೃಷ್ಣನ್ ಅಂಥ ಮಾತಾಡಿದರಾ? ಅದೇನೆ ಇದ್ದರೂ, ಪುತ್ರಶೋಕವನ್ನೂ ಮೆಟ್ಟ ನಿಂತು ಉಣ್ಣಿಕೃಷ್ಣನ್ ಅವರು ದೇಶದ ಸ್ಥಿತಿ ಬಗ್ಗೆ ಯೋಚಿಸುತ್ತಿದ್ದರೆ ಕುಟುಂಬ ಬಳಗದೊಂದಿಗೆ ಬೆಚ್ಚಗೆ ಮನೆಯಲ್ಲಿ ಕುಳಿತಿರುವ ನಮಗೇಕೆ ಈ ಪರಿಯ ವಿಸ್ಮೃತಿ? ಗೋಧ್ರಾ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಪರ್ಜಾನಿಯಾದಂಥ ಚಿತ್ರಗಳು ಹಾಗೂ ರಾಕೇಶ್ ಶರ್ಮಾ ಅವರ ‘ದ ಫೈನಲ್ ಸೊಲ್ಯೂಷನ್ ’ ಸೇರಿದಂತೆ ಸುಮಾರು ೨೨ ಸಾಕ್ಷ್ಯಚಿತ್ರಗಳು ಬಂದಿವೆ. ಇನ್ನೂ ಬರುತ್ತಲೇ ಇವೆ. ಸೆಕ್ಯುಲರ್ ಸಂವೇದನೆಗೆ ಹಿಂದೂಗಳ ಸಾವು-ನೋವಿನ ಅಳಲು ಮಾತ್ರ ಯಾವತ್ತಿಗೂ ಅಸ್ಪೃಶ್ಯವಾಗಿ ಉಳಿದುಬಿಡುವುದೇಕೆ?
-ಚೈತನ್ಯ ಹೆಗಡೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: