ಮನೆಯಲ್ಲೇ ಪರಕೀಯರಾದ ಪಂಡಿತರ ಅಳಲೇಕೆ ಇಂದಿಗೂ ಅಸ್ಪೃಶ್ಯ?

ಫೆಬ್ರವರಿ 22, 2009

ಮನೆಯಲ್ಲೇ ಪರಕೀಯರಾದ ಪಂಡಿತರ ಅಳಲೇಕೆ ಇಂದಿಗೂ ಅಸ್ಪೃಶ್ಯ?
‘ನಾನು ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ನಾನೇನೇ ಮಾತನಾಡಿದರೂ ಅದು ವಿವಾದವಾಗುತ್ತದೆ ’ ಹಾಗಂತಲೇ ಅವರು ಮಾತು ಆರಂಭಿಸಿದ್ದರು . ‘ಯಾರೂ ತಮ್ಮ ಮಕ್ಕಳನ್ನು ಸಾಯಲಿ ಎಂದು ಸೇನೆಗೆ ಕಳುಹಿಸುವುದಿಲ್ಲ. ನೀವು ನೀಡಿರುವ ಔಟ್‌ಡೇಟೆಡ್ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡೂ ಜಗತ್ತಿನ ಇನ್ಯಾವುದೇ ರಕ್ಷಣಾ ಪಡೆಗೆ ಕಡಿಮೆಯಿಲ್ಲ ಅನ್ನುವ ರೀತಿಯಲ್ಲಿ ಭಾರತೀಯ ಪಡೆಗಳು ಕರ್ತವ್ಯ ನಿರ್ವಹಿಸುತ್ತಿವೆ ’ ಹೀಗೆ ಅಭಿಮಾನದಿಂದ ಮಾತನಾಡುತ್ತ ಹೋದ ಉಣ್ಣಿಕೃಷ್ಣನ್, ಕೊನೆಗೊಂದು ಮಾತು ಹೇಳಿದರು. ‘ನನಗೆ ಯಾವಾಗ ಸಮಾಧಾನವಾಗುತ್ತದೆ ಎಂದರೆ, ಅಥವಾ ಮೇಜರ್ ಸಂದೀಪ್ ಆತ್ಮಕ್ಕೆ ಯಾವಾಗ ಶಾಂತಿ ಸಿಗಬಹುದು ಎಂದರೆ, ಕಾಶ್ಮೀರ ಕಣಿವೆಯಿಂದ ಹೊರದಬ್ಬಲಾಗಿರುವ ಜನರಲ್ಲಿ ಶೇಕಡ ೫೦ರಷ್ಟು ಮಂದಿಯನ್ನಾದರೂ ಹಿಂದಕ್ಕೆ ಕರೆಸಿಕೊಂಡು ಅವರಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸುವುದು ಸಾಧ್ಯವಾದರೆ..’ ಎಂದು ಅವರು ಉಸಿರೆಳೆದುಕೊಂಡರು.
ಹಾಗೆ ಹೇಳಿದ್ದು ಎನ್‌ಡಿಟಿವಿ ೨೦೦೮ರ ವರ್ಷದ ಭಾರತೀಯ ಪ್ರಶಸ್ತಿ ಸಮಾರಂಭದಲ್ಲಿ. ಮುಂಬಯಿ ದಾಳಿಯಲ್ಲಿ ಹುತಾತ್ಮರಾದ ವೀರರ ಕುಟುಂಬಗಳಿಗೆ ಹೃದಯಸ್ಪರ್ಶಿ ಸನ್ಮಾನ ನೀಡಿದ ಎನ್‌ಡಿಟಿವಿ, ಆ ಸಂದರ್ಭದಲ್ಲಿ ಸಂದೀಪ್ ತಂದೆ ಉಣ್ಣಿಕೃಷ್ಣನ್ ಅವರನ್ನು ಮಾತನಾಡಲು ಕೇಳಿಕೊಂಡ ಭಾವುಕ ಸಂದರ್ಭವದು. ಸಾಮಾನ್ಯವಾಗಿ ಮಕ್ಕಳನ್ನು ಕಳೆದುಕೊಂಡವರು ಇಂಥ ಸಂದರ್ಭಗಳಲ್ಲಿ ಮಾತನಾಡಬೇಕಾಗಿ ಬಂದಾಗ ಗದ್ಗದಿತರಾಗುತ್ತಾರೆ. ಅಗಲಿದವರ ನೆನಪು ಹೊತ್ತೇ ಮಾತಾಡುತ್ತಾರೆ. ಆದರೆ ಅಂಥ ವೇಳೆಯಲ್ಲೂ ದೇಶದ ಹಿತದೃಷ್ಟಿಯ ಕುರಿತೇ ಮಾತನಾಡಿದ ಉಣ್ಣಿಕೃಷ್ಣನ್ ಅವರನ್ನು ಆಲಿಸುತ್ತಾ ವೀಕ್ಷಕರ ಕೊರಳ ಸೆರೆ ಉಬ್ಬಿ ಬಂತು. ಇಂಥವರ ಮಗನಾಗಿ ಒಬ್ಬ ಸಂದೀಪ್ ಅಲ್ಲದೇ ಇನ್ಯಾರು ಹುಟ್ಟುತ್ತಾರೆ ಅಂತನಿಸಿಬಿಟ್ಟಿತು.
ವಿಶೇಷವೆಂದರೆ ಉಣ್ಣಿಕೃಷ್ಣನ್ ಮಾತುಗಳನ್ನು ಕೇಳಿಸಿಕೊಂಡು ಮನನ ಮಾಡಿಕೊಳ್ಳಬೇಕಾದವರೆಲ್ಲರೂ ವೇದಿಕೆಯ ಮುಂಭಾಗದಲ್ಲೇ ಇದ್ದರು. ಮುಖ್ಯವಾಗಿ ಎಲ್. ಕೆ. ಆಡ್ವಾಣಿ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ. ಅದೇ ವೇದಿಕೆಯಲ್ಲಿ ನವಪೀಳಿಗೆಯ ರಾಜಕೀಯ ನೇತಾರ ಎಂಬ ಪುರಸ್ಕಾರ ಸ್ವೀಕರಿಸಿದ್ದ ಉಮರ್, ‘ಕಾಶ್ಮೀರವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಶ್ರಮವಹಿಸುತ್ತೇನೆ. ಸಮಾರಂಭದಲ್ಲಿ ನನ್ನ ಪಕ್ಕದಲ್ಲೇ ಕುಳಿತಿರುವ ಆಮೀರ್ ಖಾನ್ ಕಾಶ್ಮೀರದಲ್ಲೇ ಚಿತ್ರೀಕರಣಕ್ಕೆ ಬರುವಂತಹ ವಾತಾವರಣ ನಿರ್ಮಿಸುವುದು ನನ್ನ ಅಭಿಲಾಷೆ ’ ಎಂದಿದ್ದರು. ಆ ನಂತರದ ಉಣ್ಣಿಕೃಷ್ಣನ್ ಮಾತುಗಳು ನಿಜಕ್ಕೂ ಕಾಶ್ಮೀರದ ವಾತಾವರಣ ಸುಧಾರಿಸುವುದು ಎಂದರೆ ಏನರ್ಥ ಎಂಬುದಕ್ಕೆ ದಿಕ್ಸೂಚಿಯಂತಿತ್ತು.
ಅದರಲ್ಲೂ ವೇದಿಕೆಯ ಮುಂಭಾಗದಲ್ಲಿ ‘ಜೀವಮಾನದ ಸಾಧನೆ’ ಪುರಸ್ಕಾರಕ್ಕೆ ಪಾತ್ರರಾದ ಬಿಜೆಪಿ ನಾಯಕ ಎಲ್. ಕೆ. ಆಡ್ವಾಣಿ ಕುಳಿತಿದ್ದರಲ್ಲ ? ಅವರನ್ನೂ ಉಣ್ಣಿಕೃಷ್ಣನ್ ದೃಷ್ಟಿಕೋನವನ್ನೂ ಅಕ್ಕ ಪಕ್ಕ ಇಟ್ಟು ನೋಡಿದ ತಕ್ಷಣವೇ ದೂರದ ಕಾಶ್ಮೀರ ಕಣಿವೆಯಿಂದ ಒಂದು ಆರ್ತನಾದ ಕಿವಿಗೆ ಬಡಿದ ಭಾವ. ಇತಿಹಾಸದ ಅಮಾನುಷ ಅವಮಾನಗಳು ಇದ್ದಕ್ಕಿದ್ದಂತೆ ನರ್ತಿಸತೊಡಗಿದವೇನೋ ಅನಿಸಹತ್ತಿತು.
ಅವತ್ತು ಸೆಪ್ಟೆಂಬರ್ ೧೪, ೧೯೮೯. ಎಲ್. ಕೆ. ಆಡ್ವಾಣಿ ತಲೆಬಗ್ಗಿಸಿಕೊಂಡು ಶವಯಾತ್ರೆಯೊಂದರಲ್ಲಿ ಹೆಜ್ಜೆ ಹಾಕುತ್ತಿದ್ದರು. ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಉಪಾಧ್ಯಕ್ಷ ಟಿಕಾ ಲಾಲ್ ಟಪ್ಲೂ ಕಣಿವೆಯ ಮುಸ್ಲಿಂ ಪ್ರತ್ಯೇಕತಾವಾದಿಗಳ ಗುಂಡಿಗೆ ಬಲಿಯಾಗಿದ್ದರು. ಅವರ ಅಂತ್ಯಸಂಸ್ಕಾರಕ್ಕೆಂದು ಸಾಗುತ್ತಿದ್ದ ಆಡ್ವಾಣಿ ಸಹಿತ ಇತರೆಲ್ಲರ ಮೇಲೂ ಮುಸುಕು ಧರಿಸಿ ಮರೆಯಲ್ಲಿ ನಿಂತ ಪ್ರತ್ಯೇಕತಾವಾದಿ ಪುಂಡರು ಕಲ್ಲುಗಳನ್ನು ತೂರಿದರು. ಹಿಂದೂ-ಮುಸ್ಲಿಂ ಬೇಧವಿಲ್ಲದೇ ಎಲ್ಲ ಕೋಮುಗಳಲ್ಲೂ ಜನಪ್ರಿಯರಾಗಿದ್ದ ಶ್ರೀನಗರದ ಹಬ್ಬಾ ಕದಾಲ್ ಕ್ಷೇತ್ರದ ಟಿಕಾರ ಹತ್ಯೆ ಇಡೀ ಪ್ರದೇಶಕ್ಕೆ ಸೂತಕದ ಮುಸುಕು ಹಾಕಿತ್ತು. ಆದರೇನಂತೆ, ಗೌರವಾರ್ಥವಾಗಿ ಮುಚ್ಚಿದ್ದ ಅಷ್ಟೂ ಅಂಗಡಿ ಮುಂಗಟ್ಟುಗಳನ್ನೂ ಒಂದು ಕಡೆಯಿಂದ ಬಲಾತ್ಕಾರವಾಗಿ ಬಾಗಿಲು ತೆಗೆಯುವಂತೆ ಮಾಡಿದ ಪ್ರತ್ಯೇಕತಾವಾದಿಗಳು ವಿಕೃತ ಸಂತೋಷ ಆಚರಿಸಿದರು.
ಹಾಗೆ ಶುರುವಾಗಿತ್ತು ಕಾಶ್ಮೀರಿ ಪಂಡಿತರ ಮಾರಣಹೋಮ. ಈಗಲ್ಲಿ ಕಾಶ್ಮೀರಿ ಪಂಡಿತರು ಇಲ್ಲ. ಸುಮಾರು ಏಳು ಲಕ್ಷ ಕಾಶ್ಮೀರಿ ಪಂಡಿತರು ಬಲವಂತವಾಗಿ ಹಾಗೂ ಅತಿ ಕ್ರೂರವಾಗಿ ತಮ್ಮ ತಾಯ್ನಾಡಿನ ಬೇರುಗಳಿಂದ ಬೇರ್ಪಟ್ಟು ಜಮ್ಮು ಹಾಗೂ ದಿಲ್ಲಿಯಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ೧೯೯೦ರಿಂದಲೇ ಕಾಶ್ಮೀರಿ ಪಂಡಿತರನ್ನು ಒಕ್ಕಲೆಬ್ಬಿಸುವ ಕಾರ್‍ಯ ಆರಂಭವಾಯಿತು. ಮೊನ್ನೆ ಜನವರಿ ೧೯ಕ್ಕೆ ಕಾಶ್ಮೀರಿ ಪಂಡಿತರ ಸಮುದಾಯದ ಕರುಣಾಜನಕ ಕತೆಗೆ ೧೯ ವರ್ಷಗಳು ತುಂಬಿಹೋದವು.
೧೯೯೦ರ ಜನವರಿ ೪ರಂದು ಸ್ಥಳೀಯ ಉರ್ದು ಪತ್ರಿಕೆ ‘ಅಫ್ತಾಬ್’ನಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿತು. ಹಿಂದೂಗಳು ಕಾಶ್ಮೀರ ಬಿಟ್ಟು ತೊಲಗಬೇಕು ಹಾಗೂ ಕಾಶ್ಮೀರ ಪಾಕಿಸ್ತಾನಕ್ಕೆ ಸೇರ್ಪಡೆಯಾಗಬೇಕು ಎಂಬ ಆಗ್ರಹ ಹೊತ್ತ ಒಕ್ಕಣೆಯಾಗಿತ್ತದು. ಅದರ ಬೆನ್ನಲ್ಲೇ ಕಣಿವೆಯಲ್ಲಿ ಬಂದೂಕಿನ ಘರ್ಜನೆ ಹಾಗೂ ಪ್ರತ್ಯೇಕತಾವಾದಿಗಳ ತುಚ್ಛ ಘೋಷಣೆಗಳು ಒಟ್ಟೊಟ್ಟಿಗೇ ಮೊಳಗತೊಡಗಿದವು. ‘ಗಡಿ ದಾಟುತ್ತೇವೆ. ಕಲಾಷ್ನಿಕೋವ್ ತರುತ್ತೇವೆ ’ ಅಂತ ಒಂದು ಧ್ವನಿವರ್ಧಕ ಅರಚಿಕೊಂಡರೆ, ‘ಪಂಡಿತರೇ ನಿಮ್ಮ ಹೆಂಡಂದಿರನ್ನು ಇಲ್ಲಿಯೇ ಬಿಟ್ಟು ಹೊರಹೋಗಿ, ನಾವು ಜತೆ ಸೇರಿ ಪಾಕಿಸ್ತಾನ ನಿರ್ಮಿಸುತ್ತೇವೆ ’ ಎಂಬ ಇನ್ನೊಂದು ಘೋಷಣೆ ಪ್ರತ್ಯೇಕತಾವಾದಿಗಳು ಮನುಷ್ಯರಾಗಿ ಉಳಿದಿಲ್ಲ ಎಂಬುದನ್ನು ಸಾರಿ ಹೇಳುತ್ತಿತ್ತು. ಹಿಂದುಗಳು ಮನೆಯಿಂದಲೇ ಹೊರಬೀಳದ ಪರಿಸ್ಥಿತಿ ನಿರ್ಮಾಣವಾಗಿಹೋಯಿತು. ಜೀವ ಕೈಯಲ್ಲಿ ಹಿಡಿದು ಯಾವಾಗಲೋ ಒಮ್ಮೆ ಹೊರಗೆ ಕಾಲಿಟ್ಟ ಹಿಂದುಗಳಿಗೆ ಕಂಡದ್ದು , ‘ಅಲ್ಲಾನನ್ನು ಒಪ್ಪಿಕೊಳ್ಳಿ; ಇಲ್ಲವೇ ಕಾಶ್ಮೀರ ಬಿಟ್ಟು ತೊಲಗಿ’ ಎಂದು ಜಿಹಾದಿಗಳು ಮನೆ ಬಾಗಿಲಿಗೆ ಅಂಟಿಸಿಹೋಗಿದ್ದ ಭಿತ್ತಿಪತ್ರ. ಕಾಶ್ಮೀರದ ಬೀದಿಗಳಲ್ಲಿ ಒಂದೊಂದಾಗಿ ಹಿಂದುಗಳ ಹೆಣ ಬೀಳತೊಡಗಿತು. ಟಿಕಾ ಹತ್ಯೆ ನಡೆದ ಕೆಲ ತಿಂಗಳುಗಳಲ್ಲೇ ೩೦೦ ಹಿಂದುಗಳನ್ನು ಅಮಾನುಷವಾಗಿ ಕೊಲೆ ಮಾಡಲಾಯಿತು. ಶ್ರೀನಗರ ಹೈಕೋರ್ಟ್ ನ್ಯಾಯಮೂರ್ತಿ ಕೆ. ಎನ್. ಗಂಜು ಅವರೇ ಹತ್ಯೆಯಾಗಿ ಹೋದರು ಎಂದರೆ ಇನ್ನು ಸಾಮಾನ್ಯರ ಕತೆಯೇನಾಗಿರಬಹುದು? ೮೦ರ ವೃದ್ಧ ಸರ್ವಾನಂದ ಸ್ವಾಮಿ ಹಾಗೂ ಅವರ ಮಗನನ್ನು ಅಪಹರಿಸಿದ ಜಿಹಾದಿಗಳು ಇಬ್ಬರ ಕಣ್ಣುಗಳನ್ನು ಕಿತ್ತು ಹಿಂಸಾವಿನೋದ ಅನುಭವಿಸಿ ಸಾಯಿಸಿದರು. ಶ್ರೀನಗರದ ಸೌರಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಯಿತು. ಅತ್ಯಾಚಾರಕ್ಕೊಳಗಾದ ಇನ್ನೊಬ್ಬ ಮಹಿಳೆಯ ದೇಹವನ್ನು ಶಾಮಿಲ್‌ನಲ್ಲಿಟ್ಟು ತುಂಡು ತುಂಡು ಮಾಡಲಾಗಿತ್ತು. ಇಷ್ಟೆಲ್ಲ ನಡೆಯುತ್ತಿದ್ದರೆ ಫರೂಕ್ ಅಬ್ದುಲ್ಲಾರ ಸರಕಾರ ಇದ್ದೂ ಇಲ್ಲದ ಹಾಗಿತ್ತು.
ತಾಯ್ನಾಡನ್ನು ತೊರೆಯುವ ಯಾತನಾಮಯ ನಿರ್ಧಾರ ತೆಗೆದುಕೊಳ್ಳದೇ ಕಾಶ್ಮೀರಿ ಪಂಡಿತರಿಗೆ ಬೇರೆ ದಾರಿಯೇ ಇರಲಿಲ್ಲ. ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಒಂದಿಡೀ ಸಮುದಾಯವೇ ಕಾಶ್ಮೀರ ತೊರೆದು ಜಮ್ಮು ಹಾಗೂ ದಿಲ್ಲಿಯಲ್ಲಿ ಬಂದು ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿತು. ಅಲ್ಲಿಗೆ ೫ ಸಾವಿರ ವರ್ಷಗಳ ನಾಗರಿಕತೆಯೊಂದು ಸುದ್ದಿಯಾಗದಂತೆ ಸತ್ತುಹೋಯಿತು. ಘೋರ ವ್ಯಂಗ್ಯವೊಂದು ಭೀಭತ್ಸವಾಗಿ ನಕ್ಕಿದ್ದು ಆವಾಗಲೇ. ಹಿಂದು ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲಾಗುವ ಯಾವುದೇ ದೌರ್ಜನ್ಯಕ್ಕೂ ‘ಮಾರಣಹೋಮ’, ‘ಜನಾಂಗೀಯ ದಮನ’ ಎಂಬ ಪದಪುಂಜಗಳನ್ನು ಪ್ರಯೋಗಿಸುವ ಮಾಧ್ಯಮ ಹಾಗೂ ರಾಜಕೀಯ ಪಕ್ಷಗಳ ಕಣ್ಣಿಗೆ ಕಾಶ್ಮೀರಿ ಪಂಡಿತರ ಗೋಳು ಕೊನೆಪಕ್ಷ ನಿರಾಶ್ರಿತರ ಸಮಸ್ಯೆಯಾಗಿಯೂ ಕಾಣಲಿಲ್ಲ. ಜಿಹಾದಿಗಳ ಕ್ರೌರ್‍ಯಕ್ಕೆ ಯಾರಿಂದಲೂ ರಕ್ಷಣೆ ಸಿಗದೇ ತಾಯ್ನಾಡು ತೊರೆದು ಬಂದ ಕಾಶ್ಮೀರಿ ಪಂಡಿತರನ್ನು ‘ವಲಸಿಗರು’ ಎಂಬ ಪಟ್ಟಿಯಲ್ಲಿ ಸೇರಿಸಲಾಯಿತು! ಅಂದರೆ, ಈ ಹಿಂದುಗಳು ತಮ್ಮ ಇಷ್ಟಾನುಸಾರವಾಗಿ ವಲಸೆ ಬಂದಿದ್ದಾರೆ. ಮಾನವ ಹಕ್ಕುಗಳ ಗುತ್ತಿಗೆ ಪಡೆದೇ ಅವತರಿಸಿದಂತೆ ವರ್ತಿಸುವ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಈ ವಿಷಯದಲ್ಲಿ ನೆಪಕ್ಕೊಂದು ತನಿಖೆ ನಡೆಸಿತು. ಕಾಶ್ಮೀರಿ ಪಂಡಿತರ ಮೇಲಾದ ಕ್ರೌರ್‍ಯವನ್ನು ‘ಜಿನೋಸೈಡ್’(ಸಾಮೂಹಿಕ ಹತ್ಯಾಕಾಂಡ) ಹಾಗೂ ‘ಎಥ್ನಿಕ್ ಕ್ಲಿನ್ಸಿಂಗ್’ ಅಂತ ಆಯೋಗ ಒಪ್ಪಿಕೊಳ್ಳಲಿಲ್ಲ.
ಯಾವ್ಯಾವುದೋ ದೇಶದಿಂದ ಆಶ್ರಯ ಬಯಸಿ ಬಂದವರಿಗೆಲ್ಲ ಸೂರು ಕೊಟ್ಟ ದೇಶ ಭಾರತ ಅಂತ ಹೆಮ್ಮಪಟ್ಟುಕೊಳ್ಳುವ ನಾವು, ನಮ್ಮವರೇ ಆದ ಕಾಶ್ಮೀರಿ ಪಂಡಿತರನ್ನು ನಡೆಸಿಕೊಳ್ಳುತ್ತಿರುವುದಾದರೂ ಹೇಗೆ? ಜಮ್ಮುವಿನ ಮುಥಿ ಶಿಬಿರದ ಪಂಡಿತರ ಮನೆಗಳ ಚಿತ್ರಗಳ ಮೇಲೆ ಸುಮ್ಮನೇ ಕಣ್ಣಾಡಿಸಿದರೂ ಸಾಕು ಅವರ ಅಬ್ಬೇಪಾರಿ ಬದುಕಿನ ವಿವರಗಳು ಬಿಚ್ಚಿಕೊಳ್ಳುತ್ತವೆ. ಅವನ್ನು ಮನೆಗಳು ಅನ್ನುವಂತಿಲ್ಲ. ಹತ್ತು ಅಡಿ ಅಗಲ ಹತ್ತು ಅಡಿ ಉದ್ದದ ಶೆಡ್‌ಗಳವು. ಕುಟುಂಬದ ಪಾಲಿಗೆ ಅದೇ ಜಗತ್ತು. ಎರಡು ಹೆಜ್ಜೆ ಇಟ್ಟರೆ ಅಡಿಗೆ ಮನೆ, ಇನ್ನೊಂದು ಹೆಜ್ಜೆ ಮುಂದಿಟ್ಟರೆ ಅಲ್ಲೇ ದೇವರ ಪಟ, ಮೂರು ಹೆಜ್ಜೆ ಹಿಂದಿಟ್ಟರೆ ಅದೇ ಬೆಡ್‌ರೂಮ್. ಮನೆ ಹಿರಿಯರಾರೋ ಶೆಡ್ ಹೊರಗೆ ಕುಳಿತಿದ್ದಾರೆಂದರೆ ಅದರರ್ಥ, ಅಳಿಯ-ಸೊಸೆ ಒಳಗಿದ್ದಾರೆ ಅಂತ. ಈ ಶೆಡ್‌ಗಳ ಚಾವಣಿಗೆ ಕಬ್ಬಿಣದ ಶೀಟ್‌ಗಳನ್ನು ಬಳಸಲಾಗಿದೆಯಾದ್ದರಿಂದ ಬೇಸಿಗೆಯಲ್ಲಿ ಬೇಯುವ ಅನುಭವ. ಒಮ್ಮೆ ಪ್ರಧಾನಿ ಮನಮೋಹನ್ ಸಿಂಗ್ ಈ ಶಿಬಿರಕ್ಕೆ ಭೇಟಿ ನೀಡಿದ್ದರು. ಆಗ ಅವರದ್ದೇ ಓರಗೆಯ ಅಜ್ಜಿ ಶೆಡ್‌ನ ಅತಿಚಿಕ್ಕ ಬಾಗಿಲಿನತ್ತ ಬೊಟ್ಟು ಮಾಡಿ ಕೇಳಿದ್ದಳು, ‘ನಾನು ಸತ್ತಮೇಲೆ ಹೇಗೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತಾರೆ?’. ಆ ಪ್ರಶ್ನೆಗೆ ಸಿಂಗ್ ಕಣ್ಣುಗಳು ಹನಿಗೂಡಿದ್ದವು. ಆದರೆ, ಪಂಡಿತರಿಗೆ ಪ್ಯಾಕೇಜ್ ಘೋಷಿಸಿ ಹೊರಬಂದಿದ್ದು ಬಿಟ್ಟರೆ ಮತ್ತೇನೂ ಮಾಡುವ ಸ್ಥಿತಿ ಅವರದಾಗಿರಲಿಲ್ಲ.
ಶಿಬಿರಗಳಲ್ಲಿನ ದೈನೇಸಿ ಬದುಕು ಇವರನ್ನು ಖಿನ್ನತೆಯಂಥ ಮಾನಸಿಕ ವ್ಯಸನಗಳಿಗೆ ತುತ್ತಾಗಿಸಿದೆ. ೧೯೯೭ರಲ್ಲಿ ಜಮ್ಮುವಿನ ನಾನಾ ಶಿಬಿರಗಳ ೩೦೦ ಕಾಶ್ಮೀರಿ ಪಂಡಿತರ ಕುಟುಂಬಗಳನ್ನು ಕೇಂದ್ರೀಕರಿಸಿ ಒಂದು ಅಧ್ಯಯನ ಕೈಗೊಳ್ಳಲಾಗಿತ್ತು.. ಅಲ್ಲಿ ಬೆಳಕಿಗೆ ಬಂದ ಸಂಗತಿಯೆಂದರೆ, ೧೯೯೦-೧೯೯೫ರ ಅವಯಲ್ಲಿ ಈ ಕುಟುಂಬಗಳಲ್ಲಿ ಒಟ್ಟು ೧೬ ಜನನಗಳಾಗಿವೆ ಹಾಗೂ ೪೯ ಸಾವುಗಳಾಗಿವೆ. ಒತ್ತಡದ ಜೀವನದಿಂದಾಗಿ ಮಹಿಳೆಯರ ಋತುಚಕ್ರದಲ್ಲಿ ಏರುಪೇರು, ಮರೀಚಿಕೆಯಾಗಿರು ಖಾಸಗೀತನ.. ಈ ಸ್ವರೂಪಗಳು ಹೀಗೆಯೇ ಮುಂದುವರಿದರೆ ‘ಕಾಶ್ಮೀರಿ ಪಂಡಿತರು ಎಂಬುದೊಂದು ಸಮುದಾಯವಿತ್ತು’ ಎಂದು ಇತಿಹಾಸದ ಪಠ್ಯದಲ್ಲಿ ಓದಿಕೊಳ್ಳುವ ದಿನಗಳು ಬಂದಾವು.
ಜಮ್ಮು-ಕಾಶ್ಮೀರ ಸರಕಾರ ಹಾಗೂ ನಾನಾ ರಾಜಕೀಯ ಪಕ್ಷಗಳು ಆಗಾಗ್ಗೆ ಪಂಡಿತರ ಪುನರ್ವಸತಿ ಬಗ್ಗೆ ಮಾತನಾಡುತ್ತವೆ. ವರ್ಷದ ಹಿಂದೆ ಕೆಲ ಮುಸ್ಲಿಂ ಧಾರ್ಮಿಕ ನಾಯಕರೂ ಪಂಡಿತರಿಗೆ ಪುನಃ ಕಾಶ್ಮೀರಕ್ಕೆ ಸ್ವಾಗತ ಎಂದಿದ್ದರು. ಆದರೆ ಹೀಗೆಲ್ಲ ಹೇಳಿಕೆ ನೀಡುತ್ತಿರುವ ಯಾರಲ್ಲೂ ಪ್ರಾಮಾಣಿಕ ಕಾಳಜಿ ವ್ಯಕ್ತವಾಗುತ್ತಿಲ್ಲ. ಪಂಡಿತರ ಹಿಂತಿರುಗುವಿಕೆ ಪ್ರಸ್ತಾವವಾದಗಲೆಲ್ಲ ಉಗ್ರರ ಆಕ್ರೋಶ ವ್ಯಕ್ತವಾಗಿದೆ. ೧೯೯೮ರ ಏಪ್ರಿಲ್ ೨೧ರಂದು ಉಧಮ್‌ಪುರದಲ್ಲಿ ೨೬ ಹಿಂದುಗಳ ಹತ್ಯೆ, ಮಾರ್ಚ್ ೨೦೦೩ರಲ್ಲಿ ಪುಲ್ವಾಮಾದಲ್ಲಿ ನಡೆದ ೨೪ ಕಾಶ್ಮೀರಿ ಪಂಡಿತರ ಕಗ್ಗೊಲೆಯಂಥ ಘಟನೆಗಳು ಕಾಶ್ಮೀರವು ಹಿಂದುಗಳ ಪಾಲಿಗೆ ಸುರಕ್ಷಿತವಲ್ಲ ಎಂಬುದನ್ನು ದೃಢಪಡಿಸಿದೆ.
ಈ ಎಲ್ಲ ಹತಾಶೆಗಳ ನಡುವೆಯೂ ಏನೋ ಒಂದು ಆಶಾಭಾವ ಚಿಮ್ಮಿದಂತಿದೆ. ಅವತ್ತು ಅಸಹಾಯಕರಾಗಿ ಶವಯಾತ್ರೆಯಲ್ಲಿ ತಲೆಬಗ್ಗಿಸಿಕೊಂಡು ನಡೆದಿದ್ದ ಆಡ್ವಾಣಿ ಪಕ್ಷಕ್ಕೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ೧೧ ಸೀಟುಗಳು ಸಿಕ್ಕಿವೆ. ಅವಕಾಶವಾದಿಯಾದರೂ ಪ್ರತ್ಯೇಕತಾವಾದಿಗಳ ಪಟಾಲಂಗೆ ಹೋಲಿಸಿದರೆ ಸಾವಿರ ಪಾಲು ಉತ್ತಮ ಎಂಬಂತಿರುವ ನ್ಯಾಷನಲ್ ಕಾನೆರೆನ್ಸ್ ಅಕಾರದ ಗದ್ದುಗೆ ಹಿಡಿದಿದೆ. ಇವನ್ನೆಲ್ಲ ಗಮನಿಸಿಯೇ ಉಣ್ಣಿಕೃಷ್ಣನ್ ಅಂಥ ಮಾತಾಡಿದರಾ? ಅದೇನೆ ಇದ್ದರೂ, ಪುತ್ರಶೋಕವನ್ನೂ ಮೆಟ್ಟ ನಿಂತು ಉಣ್ಣಿಕೃಷ್ಣನ್ ಅವರು ದೇಶದ ಸ್ಥಿತಿ ಬಗ್ಗೆ ಯೋಚಿಸುತ್ತಿದ್ದರೆ ಕುಟುಂಬ ಬಳಗದೊಂದಿಗೆ ಬೆಚ್ಚಗೆ ಮನೆಯಲ್ಲಿ ಕುಳಿತಿರುವ ನಮಗೇಕೆ ಈ ಪರಿಯ ವಿಸ್ಮೃತಿ? ಗೋಧ್ರಾ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಪರ್ಜಾನಿಯಾದಂಥ ಚಿತ್ರಗಳು ಹಾಗೂ ರಾಕೇಶ್ ಶರ್ಮಾ ಅವರ ‘ದ ಫೈನಲ್ ಸೊಲ್ಯೂಷನ್ ’ ಸೇರಿದಂತೆ ಸುಮಾರು ೨೨ ಸಾಕ್ಷ್ಯಚಿತ್ರಗಳು ಬಂದಿವೆ. ಇನ್ನೂ ಬರುತ್ತಲೇ ಇವೆ. ಸೆಕ್ಯುಲರ್ ಸಂವೇದನೆಗೆ ಹಿಂದೂಗಳ ಸಾವು-ನೋವಿನ ಅಳಲು ಮಾತ್ರ ಯಾವತ್ತಿಗೂ ಅಸ್ಪೃಶ್ಯವಾಗಿ ಉಳಿದುಬಿಡುವುದೇಕೆ?
-ಚೈತನ್ಯ ಹೆಗಡೆ

Advertisements

ಒಡಲ ಗುಟ್ಟನ್ನೆಲ್ಲ ಚಿತೆಯಲ್ಲಿ ಬಿಟ್ಟುಹೋದ ಒಬ್ಬ ಕಾವೊರನ್ನು ಮತ್ತೆ ಕಾಣಲಾದೀತೆ?

ಫೆಬ್ರವರಿ 22, 2009

ಅದು ೧೯೯೬ರ ಸಮಯ. ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಪಾಕಿಸ್ತಾನ ವಿರುದ್ಧದ ೧೯೭೧ರ ಯುದ್ಧದ ಗೆಲುವಿಗೆ ೨೫ ವರ್ಷಗಳು ತುಂಬಿದ ಸಂದರ್ಭವದು. ಭಾರತದ ಈ ಹೆಮ್ಮೆಯ ಗೆಲುವಿನ ನೆನಪಿಗೆ ದಿಲ್ಲಿಯಲ್ಲಿ ವರ್ಷವಿಡೀ ಅಲ್ಲಲ್ಲಿ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ೧೯೭೧ರಲ್ಲಿ ಭಾರತದ ಪರ ಹೋರಾಡಿದ ಯೋಧರನ್ನು ಹಾಗೂ ಯುದ್ಧಕ್ಕೆ ಪರೋಕ್ಷವಾಗಿ ಸಹಕರಿಸಿದ ವ್ಯಕ್ತಿಗಳನ್ನು ಅಭಿಮಾನದಿಂದ ಸ್ಮರಿಸಲು ಆ ಸಮಾರಂಭಗಳು ಮೀಸಲು. ಅಂಥದೇ ಒಂದು ಸಮಾರಂಭದಲ್ಲಿ ಸಭಿಕನಾಗಿ ಬಂದಿದ್ದ ಬಾಂಗ್ಲಾದೇಶೀಯ ವ್ಯಕ್ತಿಯೊಬ್ಬನಿಗೆ ಅಚ್ಚರಿ ಕಾದಿತ್ತು. ಯಾರ ಗಮನಕ್ಕೂ ಬಾರದಂತೆ ಸಭಿಕರ ಆಸನದ ಕೊನೆಯ ಸಾಲಿನಲ್ಲಿ ಕುಳಿತಿದ್ದ ಆಕರ್ಷಕ ವ್ಯಕ್ತಿಯೊಬ್ಬರು ಕಣ್ಣಿಗೆ ಬಿದ್ದಿದ್ದೇ ಆತನ ಅಚ್ಚರಿಗೆ ಕಾರಣ. ಸೀದಾ ಅವರ ಬಳಿ ಸಾಗಿದ ಆ ಬಾಂಗ್ಲಾದೇಶೀಯ, ‘ಸರ್! ನೀವೇಕೆ ಇಲ್ಲಿ ಕುಳಿತಿದ್ದೀರಿ? ವೇದಿಕೆಯ ಮಧ್ಯಭಾಗದಲ್ಲಿ ಇರಬೇಕಾದವರು ನೀವು. ಯಾಕೆಂದರೆ ೧೯೭೧ರ ವಿಜಯ ಸಾಧ್ಯವಾದದ್ದು ನಿಮ್ಮಿಂದ!’ ಎಂದ. ಅದಕ್ಕೆ ತುಂಬ ಸಂಕೋಚದಿಂದ ಪ್ರತಿಕ್ರಿಯಿಸಿದ ಆ ವ್ಯಕ್ತಿ, ‘ನನ್ನದೇನಿದೆ? ಅದನ್ನೆಲ್ಲ ಸಾಧ್ಯ ಮಾಡಿದ್ದು ಆ ಹುಡುಗರು’ಎಂದು ಒಂದು ಮುಜುಗರದ ನಗೆ ನಕ್ಕರು. ಸ್ವಲ್ಪ ಸಮಯದ ನಂತರ ಮತ್ಯಾರಾದರು ತನ್ನನ್ನು ಗುರುತಿಸುತ್ತಾರೋ ಎಂಬ ಹಿಂಜರಿಕೆಯಿಂದ ಸಭೆಯಿಂದಲೇ ಹೊರನಡೆದುಬಿಟ್ಟರು.
೧೯೭೧ರ ವಿಜಯದಲ್ಲಿ ನಿಮ್ಮ ಪಾಲಿದೆ ಎಂದು ಯಾರೋ ಬಾಂಗ್ಲಾದೇಶೀಯ ಪ್ರಜೆಯಿಂದ ಗುರುತಿಸಿಕೊಂಡ ಆ ವ್ಯಕ್ತಿ ಯಾರು? ಮಿಲಿಟರಿ ಅಕಾರಿಯಾ? ಯೋಧನಾ? ರಾಜಕಾರಣಿಯಾ? ಈ ಯಾವ ವರ್ಗಗಳಿಗೂ ಸೇರದ ಆ ವ್ಯಕ್ತಿಯ ಹೆಸರು ರಾಮೇಶ್ವರನಾಥ ಕಾವೊ. ಭಾರತದ ವಿದೇಶಿ ಗೂಢಚಾರ ವಿಭಾಗ ‘ರಾ’(ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಪಿತಾಮಹ ಈ ಕಾವೊ. ಪ್ರತಿಬಾರಿ ಬಾಂಬ್ ಸೋಟದ ಶಬ್ದ ಅಡಗಿದ ನಂತರ, ದಾಳಿಗೆ ಗೂಢಚಾರ ವಿಭಾಗದ ವೈಫಲ್ಯ ಕಾರಣ ಎಂಬ ಬೊಬ್ಬೆ ಬಹಳ ದಿನಗಳವರೆಗೂ ಸದ್ದು ಮಾಡುವ ಇವತ್ತಿನ ಪರಿಸ್ಥಿತಿಯಲ್ಲಿ ಕಾವೊರನ್ನು ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಬಹಳವೇ ಇದೆ.
ಗೂಢಚಾರನೆಂದರೆ ಅವನೊಬ್ಬ ಒಂಟಿ ಸೈನ್ಯ. ಕಾರ್‍ಯಾಚರಣೆಗೂ ಮುಂಚೆ ವೈರಿಯ ವಿವರಗಳನ್ನು ಕಲೆಹಾಕಿ ನೆರವಾಗುವ ಗೂಢಚಾರ ಎಂದಿಗೂ ನೇಪಥ್ಯದಲ್ಲೇ ಉಳಿದುಬಿಡುತ್ತಾನೆ. ಅದು ವ್ಯವಸ್ಥೆಯ ಅನಿವಾರ್‍ಯತೆಯೂ ಹೌದು. ಹಾಗಾಗಿಯೇ ೧೯೭೧ರ ಬಾಂಗ್ಲಾ ವಿಮೋಚನೆ ಇತಿಹಾಸವನ್ನು ಇಡಿಯಾಗಿ ಓದಿದರೂ ಅಲ್ಲೊಬ್ಬ ಕಾವೊ ಕಣ್ಣಿಗೆ ಬೀಳುವುದಿಲ್ಲ. ಆದರೆ ಗುಪ್ತಚರ ವೈಫಲ್ಯ ಎಂದು ಕಾಣದ ಹೆಗಲಮೇಲೆ ಗೂಬೆ ಕೂರಿಸುವ ರಾಜಕಾರಣಿಗಳ ಮಾತಿಗೆ ತಲೆದೂಗುವ ಮೊದಲು ಕಾವೊರಂಥ ನಿಷ್ಠಾವಂತ ಅಕಾರಿಗಳ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲ ವ್ಯವಸ್ಥೆಯಲ್ಲೂ ಢಾಳಾಗಿರುವ ನ್ಯೂನತೆಗಳು ಗೂಢಚಾರ ವಿಭಾಗದಲ್ಲೂ ಖಂಡಿತ ಇವೆ. ಆದರೆ, ಸ್ಥಾಪನೆಯಾಗಿ ಮೂರೇ ವರ್ಷಗಳಲ್ಲಿ ವಿಶ್ವವೇ ಗುರುತಿಸುವಂತೆ ಒಂದೊಮ್ಮೆ ಬೆಳೆದಿದ್ದ ‘ರಾ’ ಹಾಗೂ ಅದರ ದೃಷ್ಟಾರ ರಾಮೇಶ್ವರನಾಥ್ ಕಾವೊರನ್ನು ನೆನಪಿಸಿಕೊಳ್ಳದೇ ಸುಮ್ಮನೇ ಗೊಣಗುತ್ತಿದ್ದರೆ ಅದಕ್ಕೆ ಯಾವ ಅರ್ಥವೂ ಇರದು.
೧೯೬೨ರ ಇಂಡೋ-ಚೀನಾ ಸಮರದ ಸೋಲು ಭಾರತಕ್ಕೆ ಭಾರಿ ಮುಖಭಂಗ ಉಂಟುಮಾಡಿತು. ಕೆಟ್ಟ ರಾಜಕಾರಣವೇ ಅಪಜಯಕ್ಕೆ ಮುಖ್ಯ ಕಾರಣವಾಗಿದ್ದರೂ ಸೋಲಿನ ಪರಾಮರ್ಶೆಗೆ ಕುಳಿತಾಗ ಚರ್ಚೆಗೆ ಬಂದ ಇನ್ನೊಂದು ಪ್ರಮುಖ ಅಂಶವೆಂದರೆ ಗುಪ್ತಚರ ಮಾಹಿತಿ ಅಭಾವ. ಅವತ್ತಿನ ಕಾಲಕ್ಕೆ ಗೂಢಚಾರಿಕೆಗೆ ಅಂತ ಇದ್ದಿದ್ದು ಐಬಿ (ಇಂಟೆಲಿಜೆನ್ಸ್ ಬ್ಯೂರೊ) ಮಾತ್ರ. ಅದು ದೇಶದೊಳಗಿನ ಗುಪ್ತಚರ ಮಾಹಿತಿಗಳನ್ನು ಕಲೆಹಾಕುವಲ್ಲಿ ಹೆಚ್ಚಿನ ಗಮನವಹಿಸಿತ್ತು. ೧೯೬೨ರ ಸೋಲಿನ ನಂತರ, ನಮಗೊಂದು ವಿದೇಶಿ ಗೂಢಚಾರ ಸಂಸ್ಥೆ ಬೇಕು ಎಂಬ ಜ್ಞಾನೋದಯವಾಗಿ, ಸೆಪ್ಟೆಂಬರ್ ೨೧,೧೯೬೮ರ ವೇಳೆಗೆ ಅದು ಕಾರ್‍ಯರೂಪಕ್ಕೆ ಬಂತು. ಆ ದಿನ ಐಬಿಯಿಂದ ಬೇರ್ಪಟ್ಟು ವಿದೇಶಿ ಗುಪ್ತಚರ ಮಾಹಿತಿ ಸಂಗ್ರಹಕ್ಕೆ ರೂಪುಗೊಂಡ ಸಂಸ್ಥೆಯೇ ‘ರಾ’. ಇನ್ನೂರು ಏಜೆಂಟ್‌ಗಳನ್ನು ಇರಿಸಿಕೊಂಡು ಶುರುವಾದ ಸಂಸ್ಥೆಗೆ ಇಂದಿರಾ ಗಾಂ ಹೆಕ್ಕಿತಂದ ನಾಯಕ ರಾಮೇಶ್ವರನಾಥ್ ಕಾವೊ.
ಇಂದಿರಾ ಅವರ ಆಯ್ಕೆಗೂ ಕಾರಣವಿತ್ತು. ೧೯೪೦ರಲ್ಲಿ ವಸಾಹತುಶಾಹಿ ಪೊಲೀಸ್ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಕಾವೊ, ಸ್ವಾತಂತ್ರ್ಯ ಬರುತ್ತಲೇ ಇಂಟಲಿಜೆನ್ಸ್ ಬ್ಯುರೋದಲ್ಲಿ ನಿಯುಕ್ತಿಗೊಂಡಿದ್ದರು. ಪ್ರಧಾನಿ ಜವಹಾರ್‌ಲಾಲ್ ಅವರ ಭದ್ರತಾ ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಂಡ ಅನುಭವ ಕಾವೊ ಅವರಿಗಿತ್ತು. ೫೦ರ ದಶಕದಲ್ಲಿ ಘಾನಾ ದೇಶಕ್ಕೂ ಹೋಗಿದ್ದ ಕಾವೊ, ಅಲ್ಲಿನ ಸರಕಾರಕ್ಕೆ ಗುಪ್ತಚರ ಸಂಸ್ಥೆ ಸ್ಥಾಪಿಸಲು ಮಾರ್ಗದರ್ಶನ ನೀಡಿ ಬಂದಿದ್ದರು. ಒರಿಸ್ಸಾದ ವೈಮಾನಿಕ ಸಂಶೋಧನ ಕೇಂದ್ರದಲ್ಲಿ ತಂತ್ರಜ್ಞಾನ ಉನ್ನತಿಕರಣಕ್ಕೆ ಇವರ ಕೊಡುಗೆ ಗಮನಾರ್ಹ. ಈ ಎಲ್ಲ ವಿಶ್ವಾಸಗಳಿಂದ ಇಂದಿರಾ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕಾವೊ ಎಡವಲಿಲ್ಲ. ೧೯೬೮ರಿಂದ ಮುಂದಿನ ಒಂಬತ್ತು ವರ್ಷ ‘ರಾ’ವನ್ನು ಮುನ್ನಡೆಸಿದರು.
‘ರಾ’ದ ಸಾಮರ್ಥ್ಯ ತಿಳಿದಿದ್ದು ೧೯೭೧ರ ಬಾಂಗ್ಲಾ ಯುದ್ಧದ ವೇಳೆ. ಕಾವೊ, ಶಂಕರ್ ನಾಯರ್, ಗ್ಯಾರಿ ಸಕ್ಸೇನಾ ತಂಡ ಪಾಕಿಸ್ತಾನದ ಪ್ರತೀ ನಡೆಯ ಕುರಿತೂ ಮಾಹಿತಿ ಸಂಗ್ರಹಿಸಿತು. ಯಾವಾಗ ಪಾಕಿಸ್ತಾನ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದು ಖಚಿತವಾಯಿತೋ ಆಗಲೇ ಭಾರತ ಬಾಂಗ್ಲಾದ ಹೋರಾಟಗಾರರಿಗೆ ತರಬೇತಿ ಹಾಗೂ ಸೌಕರ್‍ಯಗಳನ್ನು ನೀಡಿ ಒಂದು ಬಂಡಾಯ ಸೈನ್ಯವನ್ನೇ ಸೃಷ್ಟಿಸಿತು. ಬಾಂಗ್ಲಾ ಹೋರಾಟಗಾರ ಮುಕ್ತಿ ವಾಹಿನಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸುವ ಕೆಲಸವನ್ನು ‘ರಾ’ ಅಚ್ಚುಕಟ್ಟಾಗಿ ಮಾಡಿತು. ವಿಶ್ಲೇಷಕರ ಪ್ರಕಾರ ಬಾಂಗ್ಲಾ ಯುದ್ಧದ ಮಂಚೂಣಿ ವಹಿಸಿದವರು ಇಬ್ಬರು. ಗೂಢಚರ ವಿಭಾಗದಲ್ಲಿ ರಾಮನಾಥ್ ಕಾವೊ ಮೊದಲ ಹಂತದ ಜವಾಬ್ದಾರಿ ನಿರ್ವಹಿಸಿದರೆ, ಎರಡನೇ ಹಂತದಲ್ಲಿ ಮಾಣಿಕ್‌ಷಾ ಅವರ ಸಮರ್ಥ ನಾಯಕತ್ವ ದೊರೆಯಿತು. ಇಬ್ಬರೂ ಇಂದಿರಾ ಗಾಂಗೆ ನೇರವಾಗಿ ವರದಿ ಮಾಡುತ್ತಿದ್ದರು. ಯುದ್ಧದ ವೇಳೆ ಗೂಢಚಾರ ಮಾಹಿತಿಗಳು ಅದೆಷ್ಟು ಖಚಿತವಾಗಿದ್ದವು ಎಂದರೆ, ಪೂರ್ವ ಪಾಕಿಸ್ತಾನದ (ಬಾಂಗ್ಲಾ) ಸಂಪುಟ ಸಭೆ ನಡೆಯುತ್ತಿದ್ದ ಕಟ್ಟಡದ ಮೇಲೆಯೇ ಭಾರತೀಯ ವಾಯುಪಡೆ ಬಾಂಬ್‌ಗಳ ಮಳೆಗರೆಯಿತು. ಚಿತ್ತಗಾಂಗ್ ನೌಕಾನೆಲೆಯಲ್ಲಿ ಪಾಕಿಸ್ತಾನದ ಒಂದೇ ಒಂದು ಹಡಗನ್ನೂ ಬಿಡದಂತೆ ಭಾರತೀಯ ನೌಕಾಪಡೆ ಎಲ್ಲವನ್ನೂ ಧ್ವಂಸಗೊಳಿಸಿತ್ತು.
ಸುಮ್ಮನೇ ಆಗಿದ್ದು ಎಂದೆನಿಸುವ ಸಾಧನೆಗಳ ಹಿಂದೆಲ್ಲ ಕಾವೊ ನೇತೃತ್ವದ ‘ರಾ’ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಕೆಲಸ ಮಾಡಿತ್ತು. ಚೀನಾ ಕುತಂತ್ರವನ್ನು ಮೆಟ್ಟಿನಿಂತು ೧೯೭೦ರ ವೇಳೆ ಸಿಕ್ಕಿಂ ಹಾಗೂ ನಾಗಾಲ್ಯಾಂಡ್‌ಗಳನ್ನು ಮತ್ತು ೮೦ರ ದಶಕದಲ್ಲಿ ಮಿಜೋರಾಂ ಅನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರ ಹಿಂದೆ ‘ರಾ’ದ ಅಗಾಧ ಪರಿಶ್ರಮವಿದೆ ಎಂಬುದನ್ನು ಅಂದಿನ ಸರಕಾರದ ಮೂಲಗಳು ಒಪ್ಪಿಕೊಂಡಿವೆ. ಆಫ್ರಿಕಾ ದೇಶಗಳಿಗೆ ಗೂಢಚಾರ ವ್ಯವಸ್ಥೆ ಸ್ಥಾಪನೆಗೆ ನೆರವು ನೀಡುವುದರಲ್ಲಿ, ನಮೀಬಿಯಾದಂಥ ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟದಲ್ಲಿ ‘ರಾ’ದ ನೆರಳಿದೆ ಎಂಬುದು ಅಚ್ಚರಿ ಹುಟ್ಟಿಸುವ ಅಂಶ.
ಹಾಗಂತ ಕಾವೊ ನೇತೃತ್ವದ ‘ರಾ’ ತಪ್ಪುಹೆಜ್ಜೆ ಇಡಲಿಲ್ಲ ಅಂತೇನಲ್ಲ. ತಮ್ಮ ಉದಾರ ಮನೋಭಾವದಿಂದ ‘ರಾ’ದಲ್ಲಿ ಅಯೋಗ್ಯರು ಬಂದು ಸೇರಲು ಕಾವೊ ಅವಕಾಶ ಮಾಡಿಕೊಟ್ಟರು ಎಂಬ ಟೀಕೆ ಅವರ ಮೇಲಿದೆ. ಆದರೆ ಯಾವ ವಿಶ್ಲೇಷಕರೂ ಅವರ ಬದ್ಧತೆ ಪ್ರಶ್ನಿಸುವ ಹಾಗಿರಲಿಲ್ಲ. ಕಾವೊ ಜತೆ ಕೆಲಸ ಮಾಡಿದ ಸಂಸ್ಥೆಯ ಮಾಜಿ ನಿರ್ದೇಶಕ ಬಿ. ರಾಮನ್ ಅವರ ಬಗ್ಗೆ ಬರೆದಿರುವುದು ಹೀಗೆ-‘ಹಿಡಿದ ಕಾರ್‍ಯ ಯಶಸ್ವಿಯಾದಾಗಲೆಲ್ಲ ಅವರು ತಮ್ಮ ತಂಡದ ಹುಡುಗರನ್ನು ಕೊಂಡಾಡಿದರು. ಮುಗ್ಗರಿಸಿದಾಗೆಲ್ಲ ತಾವೇ ವೈಫಲ್ಯದ ಹೊಣೆ ಹೊತ್ತರು. ಬರೀ ಭಾರತದಲ್ಲಷ್ಟೇ ಅಲ್ಲ,ವಿದೇಶದ ಘಟಾನುಘಟಿಗಳೊಂದಿಗೆ ಅವರ ಸಖ್ಯವಿತ್ತು. ಈ ಯಾವ ಸ್ನೇಹಗಳ ಬಗ್ಗೆಯೂ ತುಟಿಬಿಚ್ಚದ ಕಾವೊ ತಮ್ಮ ೮೨ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯುವುದರೊಂದಿಗೆ ಒಡಲಲ್ಲಿಟ್ಟುಕೊಂಡ ರಹಸ್ಯಗಳೆಲ್ಲ ಚಿತೆಯಲ್ಲಿ ಕಮರಿಹೋದವು. ಕಾವೊ ಅಂದ್ರೆ ಹಾಗೆ…’
ಫ್ರಾನ್ಸ್‌ನ ಗೂಢಚಾರ ದಿಗ್ಗಜ ಕೌಂಟ್ ಅಲೆಕ್ಷಾಂಡರ್ ಡಿ ಮರೆಂಚಸ್‌ಗೆ ಜಗತ್ತಿನ ಐವರು ಶ್ರೇಷ್ಠ ಗೂಢಚಾರರನ್ನು ಹೆಸರಿಸುವಂತೆ ಕೇಳಿದಾಗ ಕಾವೊರನ್ನು ನೆನಪಿಸಿಕೊಂಡ ಅವರು ‘ದೇಹ-ಬುದ್ಧಿಗಳ ಅದೆಂಥ ಹದಮಿಳಿತ! ಅದೇನು ಬದ್ಧತೆ, ಎಂಥಾ ಸ್ನೇಹ. ಇಷ್ಟಿದ್ದೂ ತನ್ನ ಸ್ನೇಹಿತರ ಬಗ್ಗೆ ಹಾಗೂ ಸಾಧನೆ ಕುರಿತು ಹೇಳಿಕೊಳ್ಳುವಲ್ಲಿ ಮುಜುಗರ ’ ಎಂದು ಉದ್ಗರಿಸಿದ್ದರು. ಕಾವೊ ‘ರಾ’ದಿಂದ ಹೊರನಡೆದ ನಂತರವೂ ಅಲ್ಲಿದ್ದ ಅವರ ಶಿಷ್ಯ ಸಮುದಾಯವನ್ನು ‘ಕಾವೊಬಾಯ್ಸ್ ’ ಎಂದೇ ಕರೆಯಲಾಗುತ್ತಿತ್ತು.
ತುರ್ತು ಪರಿಸ್ಥಿತಿ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಇಂದಿರಾ ವಿರುದ್ಧ ಅವರಿಗಿದ್ದ ಕ್ರೋಧದ ಬಗ್ಗೆ ಚೆನ್ನಾಗಿಯೇ ಅರಿವಿದ್ದ ಕಾವೊ ರಾಜೀನಾಮೆ ಸಲ್ಲಿಸಿ ನಿಶ್ಯಬ್ದವಾಗಿ ತೆರೆಗೆ ಸರಿದುಬಿಟ್ಟರು. ನಂತರ ೧೯೮೦ರಲ್ಲಿ ಇಂದಿರಾ ಪುನಃ ಅಕಾರಕ್ಕೆ ಬಂದಾಗ ಅವರ ಭದ್ರತಾ ಸಲಹೆಗಾರರಾದರು. ನಂತರ ರಾಜೀವ್ ಗಾಂಯವರಿಗೂ ಭದ್ರತಾ ಸಲಹೆಗಾರರಾಗಿ ಕಾರ್‍ಯನಿರ್ವಹಿಸಿದರು.
ಆದರೆ ಪ್ರಾರಂಭದಲ್ಲಿ ‘ರಾ’ಗಿದ್ದ ರಭಸ ಮುಂದುವರಿಯಲಿಲ್ಲ. ಸಂಸ್ಥೆಯನ್ನು ಸಶಕ್ತವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂಬ ರಾಜಕೀಯ ಇಚ್ಛಾಶಕ್ತಿ ನಂತರದ ದಿನಗಳಲ್ಲಿ ವ್ಯಕ್ತವಾಗಲೇ ಇಲ್ಲ. ಇಂದಿರಾ ಮೇಲಿನ ದ್ವೇಷಕ್ಕೆ ಮೊರಾರ್ಜಿಯವರು ‘ರಾ’ದ ಬಜೆಟ್‌ಗೆ ಕತ್ತರಿ ಹಾಕಿದರು. ಸಮರ್ಥ ನಾಯಕತ್ವವೂ ಒದಗಿ ಬರಲಿಲ್ಲವಾದ್ದರಿಂದ ‘ರಾ’ ಹಾಗೂ ಇಂಟಲಿಜೆನ್ಸ್ ಬ್ಯೂರೊಗಳ ನಡುವಿನ ಸಮನ್ವಯದ ಕೊರತೆ ಹಿಗ್ಗುತ್ತಲೇ ಹೋಯಿತು. ಈ ಎರಡು ಏಜೆನ್ಸಿಗಳ ನಡುವೆ ಸಮನ್ವಯವಿದ್ದಿದ್ದರೆ ಬಹುಷಃ ರಾಜೀವ್ ಗಾಂ ಹತ್ಯೆ ತಪ್ಪಿಸಬಹುದಾಗಿತ್ತೇನೊ. ಸ್ವಜನಪಕ್ಷಪಾತದ ರೋಗ ಸಂಸ್ಥೆಯನ್ನು ಎಷ್ಟರಮಟ್ಟಿಗೆ ಆವರಿಸಿತೆಂದರೆ ‘ರಾ’ ಎಂದರೆ ‘ರಿಲೇಟಿವ್ಸ್ ಆಂಡ್ ಅಸೋಸಿಯೇಟ್ಸ್ ವಿಂಗ್’ ಎಂದು ಗೇಲಿ ಮಾಡುವ ಸ್ಥಿತಿಬಂತು.
‘ರಾ’ ನೇರವಾಗಿ ಸಂಪುಟ ಕಾರ್‍ಯದರ್ಶಿ ಹಾಗೂ ಪ್ರಧಾನಿಯೊಂದಿಗೆ ವ್ಯವಹರಿಸುತ್ತದೆ. ಸಂಸತ್‌ಗೆ ಅದು ಉತ್ತರದಾಯಿ ಅಲ್ಲ. ತ್ವರಿತ ನಿರ್ಣಯಗಳನ್ನು ಕೈಗೊಳ್ಳಲು ನರವಾಗಲಿ ಎಂದು ಮಾಡಿಕೊಂಡಿದ್ದ ಈ ವ್ಯವಸ್ಥೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿತು. ಬೇಹುಗಾರಿಕೆ ಮಾಡಿ ಮಾಹಿತಿ ಕಲೆಹಾಕುವ ಕಾರ್‍ಯಕ್ಕೆ ವಿದೇಶಗಳಿಗೆ ಕಳುಹಿಸಿದ ಏಜೆಂಟರು ಅಲ್ಲಿ ಐಷಾರಾಮಿ ಜೀವನ ನಡೆಸತೊಡಗಿದರು. ಯಾವಾಗ ‘ರಾ’ ದುರ್ಬಲವಾಗತೊಡಗಿತೋ ಆಗ ವಿದೇಶಿ ಗೂಢಚಾರ ಸಂಸ್ಥೆಗಳು ಬೇಹುಗಾರಿಗೆ ಮಾಹಿತಿ ವಿನಿಮಯದ ನೆಪದಲ್ಲಿ ‘ರಾ’ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಪ್ರಾರಂಭಿಸಿದವು. ೨೦೦೪ರಲ್ಲಿ ರವೀಂದರ್ ಸಿಂಗ್ ಎಂಬ ‘ರಾ’ದ ಏಜೆಂಟ್ ಸಂಸ್ಥೆಯಲ್ಲೇ ಇದ್ದುಕೊಂಡು ಅಮೆರಿಕದ ಸಿಐಎಗೆ ಕೆಲಸ ಮಾಡಿದ . ಆತ ಕೆಲ ‘ಸೂಕ್ಷ್ಮ’ ಕಡತಗಳನ್ನೆತ್ತಿಕೊಂಡು ಅಮೆರಿಕಕ್ಕೆ ಪರಾರಿಯಾಗುವುದನ್ನು ತಡೆಯಲಾಗಲಿಲ್ಲ.
‘ರಾ’ದಲ್ಲಿ ೨೬ ವರ್ಷ ಸೇವೆ ಸಲ್ಲಿಸಿ ‘ಕಾವೊಬಾಯ್ಸ್ ಆಫ್ ಆರ್ ಆಂಡ್ ಎಡಬ್ಲ್ಯು’ ಪುಸ್ತಕ ಬರೆದ ಬಿ. ರಾಮನ್ ಸಂಸ್ಥೆಯನ್ನು ಹೀಗೆ ವಿಶ್ಲೇಷಿಸುತ್ತಾರೆ-‘ಸಂಚಿನ ಕಾರ್‍ಯಾಚರಣೆಗಳನ್ನು ಮಾಡುವುದರಲ್ಲಿ ಪ್ರಬಲವಾಗಿರುವ ಸಂಸ್ಥೆ ಗುಪ್ತಚರ ಮಾಹಿತಿ ಸಂಗ್ರಹಣೆ ಹಾಗೂ ವಿಶ್ಲೇಷಣೆಯಲ್ಲಿ ಇನ್ನೂ ಪಳಗಬೇಕಿದೆ. ಕೆಳ ಹಾಗೂ ಮಧ್ಯಮ ಹಂತದ ಗುಪ್ತಚರ ಮಾಹಿತಿ ಕಲೆಹಾಕುವುದರಲ್ಲಿ ಮುಂದಿದ್ದರೆ,ಉನ್ನತಮಟ್ಟದಲ್ಲಿ ಮುಗ್ಗರಿಸಿದೆ. ವಿಪತ್ತು ನಿರ್ವಹಣೆಯಲ್ಲಿ ನಾವು ಭೇಷ್. ಆದರೆ ವಿಪತ್ತನ್ನು ತಡೆಯುವ ಶಕ್ತಿ ಸಂಸ್ಥೆಗಿಲ್ಲ.’
ವಿದೇಶಿ ಗೂಢಚಾರ ಸಂಸ್ಥೆಗಳಾದ ಅಮೆರಿಕದ ಸಿಐಎ, ಇಸ್ರೇಲಿನ ಮೊಸಾದ್, ಬ್ರಿಟನ್‌ನ ಎಮ್‌ಐ- ೫, ೬ ಇವುಗಳ ಹೆಸರು ಕೇಳುತ್ತಲೇ ಜಗತ್ತು ಒಂದು ಮೆಚ್ಚುಗೆಯ ನೋಟ ಸಂದಾಯ ಮಾಡುತ್ತದೆ. ಅವು ಕೈಗೊಂಡ ಕೆಲ ಕಾರ್‍ಯಾಚರಣೆಗಳು ಮಿಲಿಟರಿ ಸಾಹಸವನ್ನೂ ಮೀರಿಸುತ್ತವೆ. ಅವರೊಡನೆ ಭಾರತವೂ ಗುರುತಿಸಿಕೊಳ್ಳಬೇಕಾದರೆ ಅದಕ್ಕೆ ವ್ಯಯಿಸಬೇಕಿರುವ ಶ್ರಮ ಅಪಾರ. ಅಪಾಯ ಮೈಮೇಲೆ ಎಳೆದುಕೊಂಡು ಪಾಕಿಸ್ತಾನದಂಥ ರಾಷ್ಟ್ರಗಳಿಗೆ ಕಾರ್‍ಯಾಚರಣೆಗೆ ಹೊರಡುವ ಗೂಢಚಾರನಿಗೆ ಆತನ ಕೆಲಸ ಮುಗಿದೊಡನೆ ದೊಡ್ಡಮೊತ್ತವೊಂದು ಸಂದಾಯವಾಗುವಂತಿರಬೇಕು. ಆತ ಕುಟುಂಬಕ್ಕೆ ಸರ್ವನೆರವೂ ಲಭಿಸಬೇಕು. ಕಾವೊ ಬದುಕಿನಲ್ಲಿ ಅವರು ಫೊಟೋಕ್ಕೆ ಮುಖತೋರಿಸಿದ್ದು ಕೇವಲ ಎರಡು ಬಾರಿ. ಹೇಳಿಕೆಗಳನ್ನು ಹೊತ್ತುಕೊಂಡು ಮಾಧ್ಯಮದವರೆದುರು ಕುಳಿತುಕೊಳ್ಳುವ ಜಾಯಮಾನ ಅವರದಾಗಿರಲಿಲ್ಲ. ಹಾಗೆ ಸದ್ದಿಲ್ಲದೇ ಕೆಲಸ ಮಾಡುವ ನಾಯಕ ತುರ್ತಾಗಿ ಬೇಕಾಗಿದ್ದಾನೆ.
ರಾಜಕಾರಣದ ಕೌಬಾಯ್‌ಗಳೆಲ್ಲ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಈ ಸಂದರ್ಭದಲ್ಲಿ ಕಾವೊರನ್ನೂ ಕಾವೊರ ಹುಡುಗರನ್ನೂ ನೆನಪಿಸಿಕೊಳ್ಳಬೇಕಿದೆ. ಅವತ್ತು ಒಂದು ಸದೃಢ ಗೂಢಚಾರ ವಿಭಾಗ ಕಟ್ಟಲು ಚೀನಾ ಯುದ್ಧದ ಸೋಲೇ ಸೋಪಾನವಾಯಿತು. ಇವತ್ತಿಗೆ ಗತಿಗೆಟ್ಟಂತಿರುವ ಗೂಢಚಾರ ವಿಭಾಗದ ವೈಭವವನ್ನು ಮರಳಿಸಲು ಮುಂಬಯಿ ದಾಳಿ ನೆಪವಾಗಬೇಕಿದೆ. ಆ ಕೆಲಸಕ್ಕೆ ನಮ್ಮ ನಡುವಿನಿಂದ ಒಬ್ಬ ಕಾವೊ ಎದ್ದುಬಂದಾನಾ? ಅಷ್ಟಕ್ಕೂ ಕಾವೊನಂಥ ಪ್ರತಿಭಾವಂತರು ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗಲು ರಾಜಕೀಯ ವ್ಯವಸ್ಥೆ ಅವಕಾಶ ಮಾಡಿಕೊಟ್ಟೀತಾ? ಎಲ್ಲವೂ ಪ್ರಶ್ನೆಗಳೇ.

-ಚೈತನ್ಯ ಹೆಗಡೆ

ಭಿವಾನಿ ಮಾದರಿ ಬಲಗೊಂಡರೆ ಬಂಗಾರದ ಬರ ನೀಗೀತು

ಜನವರಿ 19, 2009

ಅಂಗೈ ಅಗಲದ ಒಂದು ಕಂಚಿನ ಪದಕಕ್ಕೆ ಈ ಪಾಟಿ ಭಾವೋದ್ದೀಪನಗೊಳಿಸುವ ಬಲ ಅದೆಲ್ಲಿಂದ ಬಂದಿದ್ದು? ಒಲಿಂಪಿಕ್ಸ್‌ನ ಬಾಕ್ಸಿಂಗ್ ಅಖಾಡದಲ್ಲಿ ಭಾರತದ ಮೂವರು ಹುಡುಗರು ಸೆಣೆಸುತ್ತಿದ್ದಾಗ ಮಹಾಸಿನಿಕರಾದ ನಮ್ಮೆಲ್ಲರ ಎದೆಯಲ್ಲೂ ಒಂದು ನಿರೀಕ್ಷೆಯ ಸೌಧ ಎದ್ದುನಿಂತು ಬಿಟ್ಟಿತ್ತಲ್ಲ? ಕ್ರಿಕೆಟ್ ಪಂದ್ಯಗಳ ಲೆಕ್ಕಾಚಾರ ಮಾತ್ರ ಇಡುತ್ತಿದ್ದ ನಾವೆಲ್ಲ ಪಂಚ್‌ಗಳ ಪರಾಮರ್ಶೆಗೂ ಇಳಿಯುವಂತಾಯ್ತಲ್ಲ! ಒಲಿಂಪಿಕ್ಸ್ ಎಂದರೆ ಯಾರೋ ಪದಕ ಬಾಚಿಕೊಂಡು ಹೋಗುವ ಕ್ರೀಡಾಕೂಟ. ಇರಲಿ ಅಂತ ನಾವೂ ಹೋಗುತ್ತಿದ್ದೇವೆಯೇ ಹೊರತು ಗೆಲುವಿಗೂ ನಮಗೂ ಸಂಬಂಧವಿಲ್ಲ. ಖರೇ ಹೇಳ್ಬೇಕಂದ್ರೆ, ನಾವಲ್ಲಿ ಭಾಗವಹಿಸುವುದು ಯಾರ ಲೆಕ್ಕಕ್ಕೂ ಇಲ್ಲ ಎಂಬಿತ್ಯಾದಿ ಲಹರಿಗಳಲ್ಲೇ ನಾವಿದ್ದೆವು. ಆದರೆ ಈ ಬಾರಿ ಬೀಜಿಂಗ್‌ನಲ್ಲಿ ಅರಳಿದ ಒಂದು ಚಿನ್ನದ ನಗೆ, ಮತ್ತೆರಡು ಕಂಚಿನ ಮಿಂಚು ನಕಾರಾತ್ಮಕ ದೃಷ್ಟಿಕೋನಗಳಿಗೊಂದು ಚಿಕ್ಕ ಚುರುಕು ಮುಟ್ಟಿಸಿವೆ. ಇಲ್ಲಿಂದ ಮುಂದೆ ನಾವು ಒಲಿಂಪಿಕ್ಸ್‌ನಂಥ ವಿಶ್ವದರ್ಜೆಯ ಕ್ರೀಡಾಕೂಟಗಳ ಕುರಿತು ಇರಿಸಿಕೊಂಡಿರುವ ದೃಷ್ಟಿಕೋನ ಬದಲಾಗಬಹುದು. ಬದಲಾಗಬೇಕು ಸಹ.

ಸಾಧನೆಯತ್ತ, ಗೆಲುವಿನತ್ತ ಹೆಜ್ಜೆ ಹಾಕುವವರೆಲ್ಲ ಎದುರಿಗೊಂದು ಮಾದರಿ ಇಟ್ಟುಕೊಳ್ಳುವ ಕಾಲವಿದು. ರಾಜಕೀಯದಲ್ಲಂತೂ ಅಕಾರ ಪಡೆಯಲು ಒಂದು ಮಾದರಿ,ಹಂಚಿಕೆಗೆ ಇನ್ನೊಂದು ಮಾದರಿ, ಅಕಾರ ಉಳಿಸಿಕೊಳ್ಳಲು ಮತ್ಯಾವುದೋ ಮಾದರಿ. ಒಟ್ಟಿನಲ್ಲಿ ಮಾದರಿಗಳ ಥರಾವರಿ. ಆದರೆ ತಮಗೋಸ್ಕರ ಏನೆಲ್ಲ ಮಾದರಿಗಳನ್ನು ಮಾಡಿಕೊಂಡಿರುವ ಆಳುವವರು, ದೇಶಕ್ಕೆ ಕೀರ್ತಿ ತರುವ ಕ್ರೀಡೆಯ ಉದ್ಧಾರಕ್ಕೆ ಯಾವ ಮಾದರಿಯನ್ನೂ ಹಾಕಿಕೊಂಡಿಲ್ಲ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊರೆತ ರೋಮಾಂಚನಗಳು ಮುಂದಿನ ಬಾರಿ ಇಮ್ಮಡಿಯಾಗಬೇಕೆಂದರೆ ಅಂಥ ಮಾದರಿಗಳತ್ತ ಯೋಚಿಸಬೇಕಾದ ತುರ್ತಿದೆ.
ನಿಜ. ಶತಕೋಟಿ ಭಾರತೀಯರಿಗೆ ಮೂರು ಪದಕಗಳ ಗಳಿಕೆ ಮಹಾನ್ ಸಾಧನೆಯಲ್ಲ. ಅಷ್ಟಾಗಿಯೂ ಈ ಬಾರಿಯ ಒಲಿಂಪಿಕ್ಸ್ ಮುಖ್ಯವಾಗುವುದು ಅದು ಬಿತ್ತಿರುವ ಭರವಸೆಯಿಂದ. ಕ್ವಾರ್ಟರ್‌ಫೈನಲ್‌ವರೆಗೆ ಮುನ್ನುಗ್ಗಿದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಪದಕದ ಹೊಸ್ತಿಲಲ್ಲಿ ಎಡವಿದ ಬಾಕ್ಸರ್‌ಗಳಾದ ಅಖಿಲ್ ಕುಮಾರ್ ಹಾಗೂ ಜಿತೇಂದರ್ ಇವರೆಲ್ಲ ಭಾರತದ ಭವಿಷ್ಯದ ಬೆಳ್ಳಿರೇಖೆಗಳು.

ಸೋಲಿನಿಂದ ಪಾಠ ಕಲಿಯಬೇಕು ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಸಾಧನೆಯಿಂದಲೂ ಕಲಿಯಬೇಕಾದ ಅಂಶಗಳಿರುತ್ತವೆ. ಅರ್ಥೈಸಿಕೊಳ್ಳಬೇಕಾದ ಸೂತ್ರಗಳಿರುತ್ತವೆ. ಈ ಬಾರಿ ಬೀಜಿಂಗ್‌ನಲ್ಲಿ ಜಯಭೇರಿ ಭಾರಿಸಿದವರು ಹಾಗೂ ಗೆಲುವಿನ ಮನೆಯ ಕದ ತಟ್ಟಿ ವಾಪಸ್ ಬಂದವರು ಕರಾರುವಾಕ್ ಸಿದ್ಧತೆಯೊಂದಿಗೆ ತೆರಳಿದ್ದರು. ಉದ್ಯಮಪತಿಯ ಪುತ್ರ ಅಭಿನವ್ ಬಿಂದ್ರಾಗೆ ಸೌಕರ್‍ಯಗಳ ಕೊರತೆ ಎದುರಾಗಲಿಲ್ಲ. ಸರಕಾರದ ಕಡಿಮೆ ಗುಣಮಟ್ಟದ ಸವಲತ್ತುಗಳನ್ನು ಆಶ್ರಯಿಸಬೇಕಾದ ಅನಿವಾರ್‍ಯತೆಯೂ ಅವರಲ್ಲಿರಲಿಲ್ಲ. ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಲ್ಲಿ ಶೂಟಿಂಗ್ ಅಭ್ಯಾಸ ನಡೆಸಲು ಬೇಕಾದ ಸೌಲಭ್ಯ ದೊರಕಿಸಿ ಕೊಟ್ಟಿದ್ದರು ಅವರ ತಂದೆ ಎ. ಎಸ್. ಬಿಂದ್ರಾ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತೃಪ್ತಿದಾಯಕ ಪ್ರದರ್ಶನ ನೀಡಲು ಅವರ ತಂದೆ ಪಿ.ಎಫ್. ಹಣ ವ್ಯಯಿಸಿ ಅಭ್ಯಾಸಕ್ಕೆ ನೆರವಾಗಿದ್ದೇ ಕಾರಣ.

ಇವೆಲ್ಲದರ ಬಾಟಮ್‌ಲೈನ್ ಇಷ್ಟೇ. ಗೆಲ್ಲುವ ಛಲ-ಸಾಮರ್ಥ್ಯ ಭಾರತೀಯರಲ್ಲಿದೆ. ಆದರೆ ಅದಕ್ಕೆ ಪೂರಕವಾದ ಸೌಲಭ್ಯಗಳು ಕ್ರೀಡಾಪಟುಗಳಿಗೆ ಸಿಗಬೇಕಷ್ಟೆ. ಸುಮ್ಮನೇ ಹೋಗಿ ವಿಶ್ವದರ್ಜೆಯ ತರಬೇತಿ ಪಡೆದ ಕ್ರೀಡಾಳುಗಳೊಂದಿಗೆ ರ್ಸ್ಪಸಿ ಪದಕ ತನ್ನಿ ಎಂದರೆ ಏನರ್ಥ? ಈ ಧೋರಣೆ ಬದಲಾಯಿಸಿಕೊಂಡು ಸರಕಾರ ಕ್ರೀಡಾಪಟುಗಳಿಗೆ ಅಗತ್ಯ ಸಹಕಾರ ಒದಗಿಸಿದರೆ ಏನೆಲ್ಲ ಮ್ಯಾಜಿಕ್ ಮಾಡಬಹುದು ಎಂಬುದಕ್ಕೆ ‘ಭಿವಾನಿಯ ಭೀಮರು’ ಉತ್ತಮ ನಿದರ್ಶನ.
ಒಲಿಂಪಿಕ್ಸ್ ಬಾಕ್ಸಿಂಗ್ ಪಂದ್ಯಗಳಿಗೆ ನಮ್ಮೆಲ್ಲರನ್ನೂ ಕಾತರಿಸುವಂತೆ ಮಾಡಿದ ವಿಜೇಂದರ್, ಜಿತೇಂದರ್ ಹಾಗೂ ಅಖಿಲ್‌ಕುಮಾರ್ ಈ ಮೂವರೂ ಹರಿಯಾಣದ ಭಿವಾನಿಯವರು. ಹರಿಯಾಣ ರಾಜ್ಯದ ಒಂದು ಹಿನ್ನೀರು ಜಿಲ್ಲೆ ಭಿವಾನಿ. ಭಾರತದ ಬಹುತೇಕ ಜಿಲ್ಲೆಗಳಂತೆ ಇಲ್ಲಗಳ ಸರಮಾಲೆ ಹೊತ್ತು ದಿವ್ಯಮೌನದಲ್ಲಿರುವ ಪ್ರದೇಶ. ಆದರೆ, ಈ ಭಿವಾನಿಯ ಮಣ್ಣಿನಲ್ಲೇ ಒಂದು ‘ಪಂಚಿಂಗ್’ ಗುಣವಿದೆ. ಇಲ್ಲಿನ ಮಕ್ಕಳು ತೊಟ್ಟಿಲಲ್ಲೇ ಗುದ್ದಾಟದ ಅಭ್ಯಾಸಕ್ಕಿಳಿಯುತ್ತಾರೆ ಅನ್ನೋದೊಂದು ಮಾತು ಪ್ರಚಲಿತದಲ್ಲಿದೆ. ನಾಲ್ಕು ದಶಕಗಳ ಬಾಕ್ಸಿಂಗ್ ಇತಿಹಾಸ ಭಿವಾನಿಯದು. ರಾಷ್ಟ್ರ ಮಟ್ಟದ ಯಾವುದೇ ಬಾಕ್ಸಿಂಗ್ ಸ್ಪರ್ಧೆ ನಡದರೂ ಅದರಲ್ಲಿ ಭಾಗವಹಿಸುವ ಅರ್ಧದಷ್ಟು ಬಾಕ್ಸರ್‌ಗಳು ಭಿವಾನಿಯವರು. ನ್ಯಾಷನಲ್ ಚಾಂಪಿಯನ್ ಬಾಕ್ಸರ್ ಪರ್‍ವಿಂದರ್ ಸಿಂಗ್ ಇದೇ ನೆಲಕ್ಕೆ ಸೇರಿದವರು.
ಭಿವಾನಿಯಲ್ಲಿ ಬಾಕ್ಸಿಂಗ್‌ನ ಹವಾ ಬಲವಾಗಿದ್ದು ಕ್ಯಾಪ್ಟನ್ ಹವಾ ಸಿಂಗ್‌ರಿಂದ. ಏಷ್ಯನ್ ಗೇಮ್ಸ್‌ನಲ್ಲಿ ಎರಡು ಚಿನ್ನ ಗೆದ್ದ ಇವರು, ೧೧ ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದವರು.

೧೯೮೦ರಲ್ಲಿ ಭಿವಾನಿಯ ಬಾಕ್ಸಿಂಗ್ ಉಮೇದಿಗೆ ನೀರು-ಗೊಬ್ಬರ ಸಿಕ್ಕಿತು. ಭಾರತೀಯ ಕ್ರೀಡಾ ಪ್ರಾಕಾರ (ಸಾಯ್)ಅಲ್ಲೊಂದು ಹಾಸ್ಟೆಲ್ ಸ್ಥಾಪಿಸಿತು. ಸ್ಥಳೀಯ ಹುಡುಗರ ಪ್ರತಿಭೆಯನ್ನು ಗುರುತಿಸಿ ಅವರಿಗೆ ವಸತಿ-ಆಹಾರ ಒದಗಿಸಿತು. ಕ್ರೀಡೆಯಲ್ಲಿ ಆಸಕ್ತಿಯಿದ್ದೂ ವೆಚ್ಚ ಭರಿಸಲಾಗದೇ ಹಿಂದೆ ಸರಿದಿದ್ದ ಎಷ್ಟೋ ಯುವಕರಿಗೆ ಅಮೃತವೇ ಸಿಕ್ಕಂತಾಯ್ತು. ಅಥ್ಲೆಟಿಕ್ಸ್, ಬಾಕ್ಸಿಂಗ್, ಕುಸ್ತಿ ಹಾಗೂ ವಾಲಿಬಾಲ್‌ಗಳಲ್ಲಿ ಸಾಯ್ ಕ್ರೀಡಾಸಕ್ತರನ್ನು ಭರ್ತಿ ಮಾಡಿಕೊಂಡಿತು. ಈ ಪ್ರಯತ್ನ ಎಲ್ಲಾ ವಿಭಾಗಗಳಲ್ಲೂ ಯಶ ಕಾಣಲಿಲ್ಲ. ಆದರೆ, ಬಾಕ್ಸಿಂಗ್ ಮಾತ್ರ ಬಲವಾಗಿ ಬೇರು ಬಿಟ್ಟಿತು.

ಹಾಗೆ ಬೇರು ಬಿಟ್ಟ ಬಾಕ್ಸಿಂಗ್ ಪ್ರಬೇಧ ಹೆಮ್ಮರವಾಗಿ ಬೆಳೆಯಲು ಕಾರಣವಾದ ಹೆಸರು ಜಗದೀಶ್ ಸಿಂಗ್. ಹವಾ ಸಿಂಗ್‌ರ ಮೆಚ್ಚಿನ ಶಿಷ್ಯರಾದ ಜಗದೀಶ್, ಯುವಕರಾಗಿದ್ದಾಗ ರಾಷ್ಟ್ರಮಟ್ಟದ ಬಾಕ್ಸರ್ ಆಗಿದ್ದವರು. ಕೋಚ್‌ಗಳಿಗೆ ನೀಡಲಾಗುವ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ದ್ರೋಣಾಚಾರ್‍ಯ ಪುರಸ್ಕಾರ ವಿಜೇತರಿವರು. ಕ್ರೀಡೆಯಿಂದ ನಿವೃತ್ತಿ ಪಡೆಯುತ್ತಲೇ ಅವರು ಸಾಯ್‌ನ ಕೋಚ್ ಆಗಿ ನಿಯುಕ್ತಿಗೊಂಡರು. ೧೯೯೬ರಲ್ಲಿ ಜಗದೀಶ್ ಭಿವಾನಿಗೆ ಬಂದಿಳಿದರು. ತಮ್ಮದೇ ಒಂದು ಅಕಾಡೆಮಿಯನ್ನೂ ಸ್ಥಾಪಿಸಿದರು. ಅದೇ ಬಿಬಿಸಿ. ಭಿವಾನಿ ಬಾಕ್ಸಿಂಗ್ ಕ್ಲಬ್. ಸ್ಥಳೀಯರ ಸಹಕಾರದೊಂದಿಗೆ ಚಿಗಿತುಕೊಂಡ ಬಿಬಿಸಿ ಬಲುಬೇಗನೇ ಭಿವಾನಿಯಲ್ಲಿ ಮನೆಮಾತಾಯಿತು. ಈ ಕ್ಲಬ್ ಬಾಕ್ಸರ್‌ಗಳಿಂದ ಶುಲ್ಕವನ್ನೂ ತೆಗೆದುಕೊಳ್ಳದೇ ಕಾರ್‍ಯನಿರ್ವಹಿಸಿತು. ಜಗದೀಶ್ ಸಿಂಗ್‌ರಂಥ ಸಮರ್ಥರ ಮುಂದಾಳತ್ವ ದೊರೆತದ್ದರಿಂದ ಉಳಿದೆಲ್ಲ ಸರಕಾರಿ ಪೋಷಿತ ಕ್ರೀಡಾಕೇಂದ್ರಗಳಿಗೊದಗಿದ ಸ್ಥಿತಿ ಭಿವಾನಿಯ ಸಾಯ್‌ಗೆ ಒಕ್ಕರಿಸಲಿಲ್ಲ. ೧೦ ಲಕ್ಷ ರೂ. ಮೌಲ್ಯದ ಇಂಪೋರ್ಟೆಡ್ ಬಾಕ್ಸಿಂಗ್ ರಿಂಗ್ ಹೊಂದಿರುವ ಹೆಗ್ಗಳಿಕೆ ಈ ಕೇಂದ್ರದ್ದು. ಇಲ್ಲಿ ತರಬೇತಿಗೊಂಡ ಬಾಕ್ಸರ್‌ಗಳು ಸುಮಾರು ೧೬೧ ಅಂತಾರಾಷ್ಟ್ರೀಯ ಪುರಸ್ಕಾರಗಳನ್ನೂ ೩೧೨ ರಾಷ್ಟ್ರೀಯ ಪದಕಗಳನ್ನೂ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಸಾಯ್ ಅನ್ನು ಹೊರತುಪಡಿಸಿಯೂ ಭಿವಾನಿಯಲ್ಲಿ ಸುಮಾರು ೧೨ ಖಾಸಗಿ ಬಾಕ್ಸಿಂಗ್ ಕೇಂದ್ರಗಳಿವೆ. ಇತ್ತೀಚೆಗೆ ಉದ್ಯಮರಂಗದ ಪ್ರೋತ್ಸಾಹವೂ ದೊರೆತಿರುವುದು ಭಿವಾನಿಗೆ ಇನ್ನಷ್ಟು ಬಲ ತುಂಬಿದೆ. ಮಿತ್ತಲ್ ಚಾಂಪಿಯನ್ ಟ್ರಸ್ಟ್ ಬಾಕ್ಸರ್‌ಗಳ ತರಬೇತಿ, ಕೋಚಿಂಗ್ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ನೆರವು ಒದಗಿಸುತ್ತಿದೆ. ಚಾಂಪಿಯನ್ ಬಾಕ್ಸರ್‌ಗಳು ಮತ್ತವರ ಕೋಚ್‌ಗಳ ವಸತಿಗೆಂದೇ ಮಿತ್ತಲ್ ಟ್ರಸ್ಟ್ ಬಂಗಲೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿದೆ. ಇಂಥದೊಂದು ವಾತಾವರಣದಲ್ಲಿ ಅಲ್ಲಿನ ಹುಡುಗರು ಹತ್ತನೇ ವಯಸ್ಸಿಗೆಲ್ಲ ತರಬೇತಿ ಕೇಂದ್ರಗಳಿಗೆ ಸೇರಿ ಮುಷ್ಟಿ ಗಟ್ಟಿ ಮಾಡಿಕೊಳ್ಳುತ್ತಿರುತ್ತಾರೆ. ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಜಿತೇಂದರ್‌ಗೆ ಇನ್ನೂ ೨೧ರ ಹರೆಯ! ದೇಶಕ್ಕೆ ಬಂಗಾರ ಗೆದ್ದುಕೊಡಲು ಬೇಜಾನ್ ವರ್ಷಗಳೇ ಬಾಕಿ ಉಳಿದಿವೆ. ಜಗದೀಶ್ ಸಿಂಗ್ ಪ್ರಕಾರ ಇಂಥ ಕನಿಷ್ಠ ನೂರು ಪ್ರತಿಭೆಗಳು ಭಿವಾನಿಯ ಬಾಕ್ಸಿಂಗ್ ರಿಂಗ್ ಒಳಗೆ ಲಭ್ಯ.

ಕ್ಲಬ್‌ನಲ್ಲಿ ತರಬೇತಿ ಪಡೆದುಕೊಂಡ ಬಾಕ್ಸರ್‌ಗಳು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರತೊಡಗಿದರು. ಹೀಗೆ ತಯಾರಾದವರಿಗೆ ಸ್ಪೋರ್ಟ್ಸ್ ಕೋಟಾದಲ್ಲಿ ಸರಕಾರಿ ಕೆಲಸಗಳು ಸಿಗಲಾರಂಭಿಸಿದವು. ಇದರಿಂದ ಕ್ರೀಡೆಯಲ್ಲಿ ತೊಡಗಿಕೊಳ್ಳುವವರಿಗೆ ಉತ್ತೇಜನವೂ ದೊರೆತಂತಾಯಿತು. ಇವತ್ತಿಗೆ ಸುಮಾರು ೫೦೦ ಬಾಕ್ಸರ್‌ಗಳು ಸೈನ್ಯ, ಪ್ಯಾರಾಮಿಲಿಟರಿ ಪಡೆ, ರೈಲ್ವೆ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದಾರೆ.

ಇದು ಭಿವಾನಿಯ ಅಂತಃಸತ್ವ. ಆದಾಗ್ಯೂ ಇನ್ನೊಂದಂಶದ ಕಡೆ ಗಮನಹರಿಸಬೇಕು. ಬಾಕ್ಸಿಂಗ್‌ನಲ್ಲಿ ತೋರಿದ ಸಾಮರ್ಥ್ಯವನ್ನು ಅಥ್ಲೆಟಿಕ್ಸ್ ವಿಭಾಗಗಳಲ್ಲೂ ತೋರಿಸಲು ಭಿವಾನಿಗೆ ಸಾಧ್ಯವಾಗಲಿಲ್ಲವೇಕೆ? ಭಿವಾನಿ ಯುವಕರ ಬದ್ಧತೆ ಬಾಕ್ಸಿಂಗ್‌ಗೆ ಮಾತ್ರವಾ? ಉಹುಂ. ಇಲ್ಲಿ ಬದ್ಧತೆಯ ಕೊರತೆ ಇರುವುದು ಅಕಾರಿ ವರ್ಗಕ್ಕೆ. ಅಥ್ಲೆಟಿಕ್ಸ್‌ಗೆ ಮೀಸಲಾದ ಕ್ರೀಡಾಂಗಣದಲ್ಲಿ ಅರ್ಧಭಾಗ ನೀರು ತುಂಬಿದ್ದರೆ, ಉಳಿದೆಡೆ ಬಿದ್ದರೆ ಏಳಲಾಗದ ಗಟ್ಟಿಜಾಗ. ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್‌ಗಳಿಗೆಂದು ರೂಪಿಸಲಾದ ಒಳಾಂಗಣ ಕ್ರೀಡಾಂಗಣ ಸುಸ್ಥಿತಿಯಲ್ಲಿಲ್ಲ. ಎಲ್ಲಾ ವಿಭಾಗಗಳಿಗೂ ಜಗದೀಶ್ ಸಿಂಗ್‌ರಂಥ ಕೋಚ್‌ಗಳನ್ನು ಪಡೆಯುವ ಸೌಭಾಗ್ಯವಿಲ್ಲ.

ಭಿವಾನಿ ಮತ್ತಷ್ಟು ಬಲಗೊಳ್ಳಬೇಕು. ಮುಖ್ಯವಾಗಿ ಭಿವಾನಿಯ ಅಂತಃಸತ್ವ ಬೇರೆಡೆಗೂ ಪಸರಿಸಬೇಕು. ಭಾರತದ ಮೂಲೆ-ಮೂಲೆಗಳಲ್ಲೊಂದು ಭಿವಾನಿ ನಿರ್ಮಾಣವಾಗಬೇಕು. ಹಾಗಾಗಬೇಕಾದರೆ ಕ್ರೀಡಾ ಪ್ರಾಕಾರಗಳು ಮೈ ಕೊಡವಿ ಏಳಬೇಕು. ಜತೆಗೆ ಕಾರ್ಪೋರೇಟ್ ಬೆಂಬಲವೂ ಸಿಗುವಂತಾಗಬೇಕು. ಇಷ್ಟು ದಿನ ಉದ್ಯಮರಂಗಕ್ಕೆ ಒಂದು ಅಳುಕಿತ್ತು. ತಾವು ಕ್ರೀಡಾಳುಗಳ ಮೇಲೆ ದುಡ್ಡು ಸುರಿದರೂ ಗೆದ್ದು ಬರೋದು ಅನುಮಾನ ಅಂತ. ಅಂಥ ಸಂದೇಹಗಳಿಗಿನ್ನು ಆಸ್ಪದವಿಲ್ಲ. ಟ್ರಕ್ ಡ್ರೈವರ್ ಮಗ ಸುಶೀಲ್‌ಕುಮಾರ್ ತಮ್ಮೆಲ್ಲ ಆರ್ಥಿಕ ಅಡೆತಡೆಗಳ ನಡುವೆಯೂ ಕುಸ್ತಿಯಲ್ಲಿ ಕಂಚು ತಂದಿದ್ದಾರೆ. ಸಾಮರ್ಥ್ಯ ನಮಗಿದೆ, ಅದಕ್ಕೆ ತಕ್ಕ ಸೌಲಭ್ಯ ಕೊಡಿ ಎಂಬ ಸ್ಪಷ್ಟ ಸಂದೇಶ ಈ ಬಾರಿಯ ಒಲಿಂಪಿಕ್ಸ್‌ನಿಂದ ಸಿಕ್ಕಿದೆ.

ಒಬ್ಬ ಉದ್ಯಮಪತಿ ಮನಸ್ಸು ಮಾಡಿದರೆ ದೇಶಕ್ಕೊಂದು ಚಿನ್ನ ಬರಬಹುದು ಅಂತಾದರೆ, ಒಬ್ಬ ಅಭಿನವ್ ಬಿಂದ್ರಾ ರೂಪುಗೊಳ್ಳಬಹುದಾದರೆ, ಇಕನಾಮಿಕ್ ಸೂಪರ್‌ಪವರ್ ಆಗುವದರತ್ತ ಹೆಜ್ಜೆ ಇಡುತ್ತಿರುವ ಭಾರತ ದೇಶ ಇಚ್ಛಾಶಕ್ತಿ ತೋರಿದ್ದೇ ಆದಲ್ಲಿ ಬಂಗಾರ ಗೆಲ್ಲುವುದು ಕಷ್ಟದ ಮಾತಾ?

-ಚೈತನ್ಯ ಹೆಗಡೆ

ಅಪರೂಪಕ್ಕೊಮ್ಮೆ ಹೋಗುವ ಕರೆಂಟು ನೆನಪುಗಳ ಸ್ವಿಚ್ಚು ಅದುಮುತ್ತದೆ..

ಜನವರಿ 19, 2009

ಟ್ರಾಫಿಕ್ ಜಯಿಸಿ ಬಂದ ನಿಟ್ಟುಸಿರು. ಒಂದು ಖಡಕ್ ಛಾಯ್. ಎಲ್ಲ ಗಮನಿಸುವ, ಏನನ್ನೋ ಕಳೆದುಕೊಳ್ಳುವ ಧಾವಂತದಲ್ಲಿ ರಿಮೋಟ್ ಹಿಡಿದು ಟಿವಿ ಚಾನಲ್‌ಗಳ ತಿರುವು-ಮುರುವು. ತೆರದುಕೊಳ್ಳಲಿರುವ ನಾಳೆಯ ಒತ್ತಡಗಳಿಗೆ ಮನದಲ್ಲೊಂದು ಅಡ್ವಾನ್ಸ್ ಮುನಿಸು. ಬೆಂಗಳೂರಿನಲ್ಲಿ ಬದುಕು ಸಾಗುತ್ತಲೇ ಇದೆ…
ಹಾಗೊಂದು ರಾತ್ರಿ ಕರೆಂಟು ಹೋಯ್ತು. ಹೋದ ಕರೆಂಟಿಗಿಷ್ಟು ಹಿಡಿಶಾಪ. ಇನ್ನೆಷ್ಟು ಹೊತ್ತು? ಈಗ ಬಂದುಬಿಡುತ್ತದೆಂಬ ನಿರೀಕ್ಷೆ. ಬರದಿದ್ದಾಗ ಹಿಡಿಶಾಪ. ಒಳ್ಳೆಯದೋ, ಕೆಟ್ಟದ್ದೋ ವಿಂಗಡನೆ ಗೊತ್ತಿಲ್ಲವಾಗಲೀ ಈ ವಿಷಾದ ಸಹ ಅನುಭೂತಿಯೋಗ್ಯ. ಸಂತೋಷದಂತೆ.
ಸರಿ, ಇನ್ನೆಷ್ಟು ಹೊತ್ತು ಅಂತ ಕಾಯೋದು? ಮೊಂಬತ್ತಿ ಹಚ್ಚು. ಊಟ ಮಾಡೋಣ. ಅರೆ! ಈ ಮೊಂಬತ್ತಿ ಬೆಳಕಲ್ಲಿ ಊಟ ಅದೆಷ್ಟು ಸವಿ? ಕರೆಂಟ್ ಇದ್ದರೆ ಸುತ್ತ ಹತ್ತಾರು ಕಿರಿಕಿರಿಗಳಿಗೆ ಜೀವವಿರುತ್ತಿತ್ತು. ಆದರೆ ಈ ಮೊಂಬತ್ತಿ ಬೆಳಕಲ್ಲಿ ಕಾಣೋದು ನಾನು, ನೀನು ಹಾಗೂ ಊಟದ ತಟ್ಟೆ ಮಾತ್ರ. ನಾಲಗೆ ಮೇಲಿನ ಪ್ರತಿ ತುತ್ತಿಗೂ ಜೀವ.
ಕತ್ತಲೆ ಭವಿಷ್ಯದ ಬಗ್ಗೆ ಯೋಚಿಸಗೊಡುವುದಿಲ್ಲ. ಸೂರು ನೋಡುತ್ತ ಅಂಗಾತ ಬಿದ್ದುಕೊಂಡರೆ ನೆನಪುಗಳದ್ದೇ ಜಿನುಗು. ಆಕಾಶದಿಂದುದುರಿ ಬಿದ್ದಂತೆ. ಮೂರು ವರ್ಷದ ಹಿಂದೆ ಮನೆಯಿಂದ ಹೊರಬಿದ್ದದ್ದು.. ವರ್ಷದ ಹಿಂದಷ್ಟೇ ಬೈಕು ತೆಗೆದುಕೊಂಡಿದ್ದು..ನೆನಪುಗಳ ಸಾಲು ಸಾಲು ಮೆರವಣಿಗೆ. ಮೂಲೆಯಲ್ಲಿ ಬಿದ್ದಿದ್ದ ರೆಡಿಯೊ ಹುಡುಕಿ ಮೈದಡವಿದರೆ ಅದರಲ್ಲೂ ಹಳೆ ಚಿತ್ರಗೀತೆಗಳ ಹಂಗಾಮ.
ಇನ್ನೇನು ಕೆಲಸ? ಕರೆಂಟು ಬರುವ ಲಕ್ಷಣಗಳಿಲ್ಲ. ಟೆರೇಸಿಗಾದರೂ ಹೋಗೋಣ. ವಾವ್! ಹೀಗೆ ಬೀಸಿ ಬರುವ ತಂಗಾಳಿಗೆ ಪುರಸೊತ್ತಿನಲ್ಲಿ ಮೈಯೊಡ್ಡದೇ ಅದೆಷ್ಟು ದಿನಗಳಾಗಿಬಿಟ್ಟಿದ್ದವು? ಅದೇನದು ತೇಲಿ ಬರುತ್ತಿರುವ ಗುನುಗು? ಅತ್ತ ನೋಡಿದರೆ ಪಕ್ಕದ ಮನೆ ತಾತನೂ ಟೆರೇಸ್‌ಗೆ ಬಂದು ಹಾಡುತ್ತಿದ್ದಾನೆ. ‘ಅಮರ ಮಧುರ ಪ್ರೇಮ.. ನೀ ಬಾ ಬೇಗ ಚಂದಮಾಮ..’ ಅಜ್ಜಿಯನ್ನು ಊರಲ್ಲಿನ ಟೆಂಟ್ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ ನೆನಪು ಬಂತಾ?
ಓಣಿಯಲ್ಲೆಲ್ಲ ಝಗಮಗಿಸುತ್ತಿದ್ದ ದೀಪಗಳು ಇಷ್ಟು ದಿನ ಆಕಾಶವನ್ನು ಕತ್ತಲೆಯಲ್ಲಿ ಅಡಗಿಸಿಟ್ಟುಬಿಟ್ಟಿದ್ದವೆನಿಸುತ್ತಿದೆ. ಇದೇ ಚುಕ್ಕಿ-ಚಂದ್ರಮರನ್ನು ತೋರಿಸಿಯೇ ಅಲ್ಲವಾ ಚಿಕ್ಕಂದಿನಲ್ಲಿ ಅಮ್ಮ ತುತ್ತುಣಿಸುತ್ತಿದ್ದುದು. ಅಮ್ಮನ ಕತೆಗಳ ಗುಮ್ಮನ ಸಾಮ್ರಾಜ್ಯ ಅಡಗಿದ್ದುದೂ ಮೋಡಗಳ ಹಿಂದೆಯೇ. ಆಗೊಮ್ಮೆ ಆಕಾಶ ನೋಡುತ್ತಿದ್ದಾಗ ಭಯವಾಗಿ ಬಿಟ್ಟಿತ್ತು. ಆಕಾಶವೇನಾದರೂ ಕಳಚಿ ಬಿದ್ದು ಬಿಟ್ಟರೆ ಅಂತ. ಹಿಂದೆಯೇ ಡಿಂಗ, ಫ್ಯಾಂಟಮ್ ಎಲ್ಲ ನೆನಪಾಗಿ ಸಮಾಧಾನವಾಗಿತ್ತು.
ಫಕ್ಕನೇ ಕರೆಂಟು ಬಂತು. ಗತದ ನೆನಪುಗಳಲ್ಲಿ ಹುದುಗಿಹೋಗಿದ್ದ ವರ್ತಮಾನದ ವಗೈರೆಗಳನ್ನು ಹೊರಗೆಳೆಯುತ್ತಾ…

Hello world!

ಜನವರಿ 19, 2009

Welcome to WordPress.com. This is your first post. Edit or delete it and start blogging!